ಕಠಿಣ ಷರತ್ತಿನೊಂದಿಗೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕರಿಗೆ ಬಿಸಿಸಿಐ ಹುಡುಕಾಟ

Update: 2023-12-26 18:20 GMT

Photo: PTI 

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗಾಗಿ ಹೊಸ ಶೀರ್ಷಿಜಕೆ ಪ್ರಾಯೋಜಕರ ಹುಡುಕಾಟದಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬಿಡ್ಡರ್ಗಳಿಗೆ ಕಠಿಣ ಷರತ್ತುಗಳನ್ನು ವಿಧಿಸಿದೆ ಎಂದು ವರದಿಯೊಂದು ತಿಳಿಸಿದೆ.

ವಿಶೇಷವಾಗಿ, ಚೀನಾ ಮೂಲದ ಕಂಪೆನಿಗಳು ಅಥವಾ ಬ್ರ್ಯಾಂಡ್ ಗಳಿಂದ ಬಿಡ್ ಗಳನ್ನು ಪರಿಗಣಿಸಲು ಬಿಸಿಸಿಐ ಹಿಂಜರಿಯುತ್ತಿದೆ. ಭಾರತದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡದ ರಾಷ್ಟ್ರಗಳೊಂದಿಗೆ ಸಂಬಂಧಗಳ ಬಗ್ಗೆ ಆತಂಕಗಳನ್ನು ಉಲ್ಲೇಖಿಸಿದೆ.

ನಿರ್ದಿಷ್ಟ ದೇಶಗಳು ಹಾಗೂ ಬ್ರ್ಯಾಂಡ್ ಗಳನ್ನು ಬಿಸಿಸಿಐ ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ ಚೀನಾದ ಸ್ಮಾರ್ಟ್ ಫೋನ್ ತಯಾರಕ ಕಂಪೆನಿ ವಿವೋ ಜೊತೆಗಿನ ನಕಾರಾತ್ಮಕ ಅನುಭವ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಭಾರತ ಹಾಗೂ ಚೀನಾ ನಡುವಿನ ಗಡಿ ಬಿಕ್ಕಟ್ಟಿನ ನಂತರ ಉದ್ವಿಗ್ನ ಪರಿಸ್ಥಿತಿಯು ನೆಲೆಸಿತ್ತು. ಆಗ ವಿವೋ ಐದು ವರ್ಷಗಳ ಪ್ರಾಯೋಜಕತ್ವ ಒಪ್ಪಂದದಿಂದ ನಿರ್ಗಮಿಸಲು ನಿರ್ಧರಿಸಿತ್ತು. ಟಾಟಾ ಗ್ರೂಪ್ಗೆ ಪ್ರಾಯೋಜಕತ್ವ ಹಕ್ಕುಗಳನ್ನು ಬಿಟ್ಟುಕೊಟ್ಟಿತ್ತು ಎಂದು ಕ್ರಿಕ್ ಬಝ್ ಉಲ್ಲೇಖಿಸಿದೆ.

ಫ್ಯಾಂಟಸಿ ಗೇಮ್ ಗಳು, ಕ್ರೀಡಾ ಉಡುಪುಗಳು, ಕ್ರಿಪ್ಟೋಕರೆನ್ಸಿ, ಬೆಟ್ಟಿಂಗ್, ಜೂಜು ಹಾಗೂ ಆಲ್ಕೋಹಾಲ್ ಉತ್ಪನ್ನಗಳಿಗೆ ಸಂಬಂಧಿಸಿದ ಕಂಪೆನಿಗಳನ್ನು ಅನರ್ಹ ಬಿಡ್ಡರ್ ಗಳ ಪಟ್ಟಿಯಲ್ಲಿ ಬಿಸಿಸಿಐ ಸೇರಿಸಿದೆ. ಪ್ರಾಯೋಜಕತ್ವದ ಟೆಂಡರ್ ಗೆ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರದಿದ್ದರೂ ಐಪಿಎಲ್ ಗೆ ಜಾಗತಿಕ ಸ್ಥಾನಮಾನ ನೀಡಿದ ಪ್ರತಿಷ್ಠಿತ ಬಿಡ್ಡರ್ಗಳನ್ನು ಆಕರ್ಷಿಸಲು ಬಿಸಿಸಿಐ ಬಯಸಿದೆ. ಐದು ವರ್ಷಗಳ ಪ್ರಾಯೋಜಕತ್ವ ಒಪ್ಪಂದ 2028ರ ತನಕ ವಿಸ್ತರಣೆಯಾಗಲಿದ್ದು, ಜನವರಿ 13-14ರಂದು ಬಿಡ್ಡಿಂಗ್ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ. ಐಟಿಟಿ ದಾಖಲೆಯು ಜನವರಿ 8ರ ತನಕ ಖರೀದಿಗೆ ಲಭ್ಯವಿದೆ. 

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News