ಬಾರ್ಡರ್-ಗವಾಸ್ಕರ್ ಟ್ರೋಫಿ | ಕ್ಯಾಮರೂನ್ ಗ್ರೀನ್ ಬ್ಯಾಟಿಂಗ್‌ಗೆ ಮಾತ್ರ ಲಭ್ಯ
ಮೆಲ್ಬರ್ನ್ : ಮುಂದಿನ ತಿಂಗಳು ಭಾರತ ಕ್ರಿಕೆಟ್ ತಂಡದ ವಿರುದ್ಧ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್, ಬ್ಯಾಟರ್ ಆಗಿ ಮಾತ್ರ ಆಡಲಿದ್ದಾರೆ. ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತ್ಯದಲ್ಲಿ ಅವರು ಮತ್ತೆ ಬೌಲಿಂಗ್ ಮಾಡುವ ಸಾಧ್ಯತೆಯಿದೆ.
ಕ್ರಿಕೆಟ್ ಆಸ್ಟ್ರೇಲಿಯವು ಈ ವಾರಾಂತ್ಯದಲ್ಲಿ ಗ್ರೀನ್ ಅವರ ಬೆನ್ನುನೋವಿನ ಕುರಿತಂತೆ ಅಧಿಕೃತವಾಗಿ ಪ್ರಕಟನೆ ಹೊರಡಿಸುವ ಸಾಧ್ಯತೆಯಿದೆ. ಟೆಸ್ಟ್ ಸರಣಿಯ ಅಂತ್ಯದ ತನಕ ಗ್ರೀನ್ ಅವರು ಬೌಲಿಂಗ್ ಮಾಡುವ ಸಾಧ್ಯತೆ ಇಲ್ಲದ ಕಾರಣ ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ದಿ ಏಜ್ ವರದಿ ಮಾಡಿದೆ.
ಗ್ರೀನ್ ಈ ವಾರ ನಡೆಯಲಿರುವ ಶೀಫೀಲ್ಡ್ ಶೀಲ್ಡ್‌ನ ಮೊದಲ ಸುತ್ತಿನಿಂದ ಹೊರಗುಳಿಯಲಿದ್ದು, ಎರಡನೇ ಸುತ್ತಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಆದರೆ ನವೆಂಬರ್ ಆದಿಯಲ್ಲಿ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಭಾರತ ಎ ತಂಡದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯ ಎ ತಂಡದ ಪರವಾಗಿ ಬ್ಯಾಟರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
25ರ ಹರೆಯದ ಗ್ರೀನ್ ಅವರು ಡೇವಿಡ್ ವಾರ್ನರ್ ನಿವೃತ್ತಿಯ ನಂತರ 4ನೇ ಕ್ರಮಾಂಕಕ್ಕೆ ಭಡ್ತಿ ಪಡೆದಿದ್ದು, ಸ್ಟೀವ್ ಸ್ಮಿತ್ ಆರಂಭಿಕ ಆಟಗಾರನಾಗಿ ಆಡಲಿದ್ದಾರೆ. ಮಿಚೆಲ್ ಮಾರ್ಷ್ ಅವರು ಬೌಲರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಆಫ್ ಸ್ಪಿನ್ನರ್ ನಥಾನ್ ಲಿಯೊನ್ ಅವರು ಆಸ್ಟ್ರೇಲಿಯದ ಪರ ಹೆಚ್ಚು ಓವರ್ ಆಡಲಿದ್ದಾರೆ. ಮೊದಲ ಮೂರು ಟೆಸ್ಟ್ ನಡೆಯಲಿರುವ ಪರ್ತ್, ಅಡಿಲೇಡ್ ಹಾಗೂ ಬ್ರಿಸ್ಬೇನ್‌ನಲ್ಲಿ ಹೆಚ್ಚು ಲಾಭ ಪಡೆಯುವ ನಿರೀಕ್ಷೆ ಇದೆ.