3ರ ಹರಯದ ಅತಿ ಕಿರಿಯ ಶ್ರೇಯಾಂಕಿತ ಚೆಸ್ ಆಟಗಾರ
ಹೊಸದಿಲ್ಲಿ: ಟಿವಿಯಲ್ಲಿ ಕಾರ್ಟೂನ್ ನೋಡುತ್ತಾ ಸಮಯ ಕಳೆಯುವ ಹೊತ್ತಿನಲ್ಲಿ, ಮೂರು ವರ್ಷದ ಮಗುವೊಂದು ಚೆಸ್ ಕ್ರೀಡೆಯಲ್ಲಿ ಇತಿಹಾಸ ಸೃಷ್ಟಿಸಿದೆ. ಉತ್ತರ ಕೋಲ್ಕತಾದ ಕೈಖಾಲಿ ಎಂಬಲ್ಲಿನ ಮೂರು ವರ್ಷ ಎಂಟು ತಿಂಗಳು ಮತ್ತು 19 ದಿನಗಳ ಮಗು ಅನೀಶ್ ಸರ್ಕಾರ್, ಚೆಸ್ ಇತಿಹಾಸದ ಅತ್ಯಂತ ಕಿರಿಯ ಶ್ರೇಯಾಂಕಿತ ಆಟಗಾರನಾಗಿ ಹೊರಹೊಮ್ಮಿದೆ.
2021 ಜನವರಿ 26ರಂದು ಜನಿಸಿರುವ ಅನೀಶ್, ಅಕ್ಟೋಬರ್‌ನಲ್ಲಿ ನಡೆದ ಪಶ್ಚಿಮ ಬಂಗಾಳ ರಾಜ್ಯ ಅಂಡರ್-9 ಓಪನ್ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾನೆ. ಇದು ಬಾಲಕನ ಮೊದಲ ಸ್ಪರ್ಧಾತ್ಮಕ ಪಂದ್ಯಾವಳಿಯಾಗಿದೆ. ಅವನು ಪಂದ್ಯಾವಳಿಯಲ್ಲಿ 8 ಅಂಕಗಳ ಪೈಕಿ 5.5 ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾನೆ. ಇಬ್ಬರು ಶ್ರೇಯಾಂಕಿತ ಆಟಗಾರರನ್ನು ಸೋಲಿಸಿ 24ನೇ ಸ್ಥಾನ ಪಡೆದುಕೊಂಡಿದ್ದಾನೆ.
ಅದೂ ಅಲ್ಲದೆ, ಬೆಂಗಾಲ್ ರ್ಯಾಪಿಡ್ ರೇಟಿಂಗ್ ಓಪನ್ ಪಂದ್ಯಾವಳಿಯ ವೇಳೆ ಏಕಕಾಲದಲ್ಲಿ ನಡೆದ ಪ್ರದರ್ಶನ ಪಂದ್ಯವೊಂದರಲ್ಲಿ ಭಾರತದ ನಂಬರ್ ವನ್ ಮತ್ತು ವಿಶ್ವದ ನಂಬರ್ 4ನೇ ರ್ಯಾಂಕಿಂಗ್‌ನ ಆಟಗಾರ ಗ್ರಾಂಡ್‌ಮಾಸ್ಟರ್ ಅರ್ಜುನ್ ಎರಿಗಸಿ ಜೊತೆಗೆ ಆಡುವ ಅವಕಾಶವೂ ಅನೀಶ್‌ಗೆ ಲಭಿಸಿದೆ.
ಈ ಹಿಂದೆ ತೇಜಸ್ ತಿವಾರಿ ಮಾಡಿರುವ ದಾಖಲೆಯನ್ನು ಅನೀಶ್ ಮುರಿದಿದ್ದಾನೆ. ತೇಜಸ್ ತನ್ನ ಐದನೇ ವರ್ಷದಲ್ಲಿ ಭಾರತದ ಅತಿ ಕಿರಿಯ ಫಿಡೆ ರೇಟಡ್ ಆಟಗಾರ ಆಗಿದ್ದರು.