ಆಸ್ಟ್ರೇಲಿಯ ಎ ವಿರುದ್ಧದ 4 ದಿನಗಳ ಅನಧಿಕೃತ ಟೆಸ್ಟ್ | ಭಾರತ ಎ 107 ರನ್‌ಗೆ ಆಲೌಟ್

Update: 2024-10-31 15:41 GMT

PC :  PTI 

ಮ್ಯಾಕೇ (ಆಸ್ಟ್ರೇಲಿಯ) : ಆಸ್ಟ್ರೇಲಿಯ ಎ ತಂಡದ ವಿರುದ್ಧದ ಮೊದಲ ನಾಲ್ಕು ದಿನಗಳ ‘ಅನಧಿಕೃತ ಟೆಸ್ಟ್’ನ ಮೊದಲ ದಿನವಾದ ಗುರುವಾರ ಭಾರತ ಎ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 107 ರನ್‌ ಗಳಿಗೆ ಆಲೌಟಾಗಿದೆ.

ಆಸ್ಟ್ರೇಲಿಯದ ಕ್ವೀನ್ಸ್‌ಲ್ಯಾಂಡ್‌ ನ ಮ್ಯಾಕೇಯಲ್ಲಿರುವ ಗ್ರೇಟ್ ಬ್ಯಾರಿಯರ್ ರೀಫ್ ಅರೀನಾದಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟರ್ ಅಭಿಮನ್ಯು ಈಶ್ವರನ್ ಮತ್ತು ಆಲ್‌ ರೌಂಡರ್ ನಿತೀಶ್ ರೆಡ್ಡಿ ತಮ್ಮ ಸಾಮರ್ಥ್ಯ ತೋರಿಸಲು ವಿಫಲರಾದರು.

ಆಸ್ಟ್ರೇಲಿಯ ಎ ತಂಡದ ವೇಗಿ ಬ್ರೆಂಡನ್ ಡಾಗೆಟ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 11 ಓವರ್‌ ಗಳಲ್ಲಿ ಕೇವಲ 15 ರನ್‌ ಗಳನ್ನು ನೀಡಿ 6 ವಿಕೆಟ್‌ಗಳನ್ನು ಉರುಳಿಸಿದರು. ಇದು ಅವರ ಜೀವನಶ್ರೇಷ್ಠ ನಿರ್ವಹಣೆಯಾಗಿದೆ. ಕೇವಲ ಮೂವರು ಭಾರತೀಯ ಬ್ಯಾಟರ್‌ ಗಳಿಗೆ ಎರಡಂಕಿಯ ಮೊತ್ತ ತಲುಪಲು ಸಾಧ್ಯವಾಯಿತು.

ಬೌನ್ಸ್ ಮತ್ತು ಸೀಮ್ ಚಲನೆಗೆ ನೆರವು ನೀಡುವ ಪಿಚ್‌ ನಲ್ಲಿ ಬ್ಯಾಟಿಂಗ್ ಮಾಡಲು ಭಾರತೀಯ ಬ್ಯಾಟರ್‌ ಗಳು ಪರದಾಡಿದರು.

ದಿನದಾಟ ಮುಗಿದಾಗ ಆಸ್ಟ್ರೇಲಿಯ ಎ ತನ್ನ ಮೊದಲ ಇನಿಂಗ್ಸ್‌ ನಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 99 ರನ್‌ ಗಳನ್ನು ಗಳಿಸಿದೆ. ಮುಕೇಶ್ ಕುಮಾರ್ (2-30) ಮತ್ತು ಪ್ರಸಿದ್ಧ ಕೃಷ್ಣ (2-18) ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಟಾಸ್ ಗೆದ್ದ ಆಸ್ಟ್ರೇಲಿಯ ಎ ಮೊದಲು ಎದುರಾಳಿಯನ್ನು ಬ್ಯಾಟಿಂಗ್‌ ಗೆ ಇಳಿಸಿತು.

ಎಲ್ಲರ ಗಮನ ಈಶ್ವರನ್ ಮತ್ತು ರೆಡ್ಡಿ ಮೇಲಿತ್ತು. ಅವರು ಆಸ್ಟ್ರೇಲಿಯದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಡುವ ಭಾರತೀಯ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸರಣಿಯ ಮೊದಲ ಪಂದ್ಯವು ನವೆಂಬರ್ 22ರಂದು ಪರ್ತ್‌ ನಲ್ಲಿ ಆರಂಭಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News