ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ| ಭಾರತೀಯ ಅಭಿಮಾನಿಗಳಿಗೆ ಕ್ಷಿಪ್ರ ವೀಸಾ ನೀಡಲು ವ್ಯವಸ್ಥೆ: ಪಿಸಿಬಿ ಮುಖ್ಯಸ್ಥ
ಲಾಹೋರ್: ಮುಂದಿನ ವರ್ಷದ ಆರಂಭದಲ್ಲಿ ಪಾಕಿಸ್ತಾನದಲ್ಲಿ ನಡೆಯಲು ನಿಗದಿಯಾಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳನ್ನು ವೀಕ್ಷಿಸಲು ಬಯಸುವ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕ್ಷಿಪ್ರವಾಗಿ ವೀಸಾಗಳನ್ನು ನೀಡುವ ನೀತಿಯೊಂದನ್ನು ಅಳವಡಿಸಿಕೊಳ್ಳಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಅಧ್ಯಕ್ಷ ಹಾಗೂ ದೇಶದ ಆಂತರಿಕ ವ್ಯವಹಾರಗಳ ಸಚಿವ ಮುಹ್ಸಿನ್ ನಖ್ವಿ ಶುಕ್ರವಾರ ಹೇಳಿದ್ದಾರೆ.
ಅಮೆರಿಕದಿಂದ ಬಂದಿರುವ ಸಿಖ್ ಯಾತ್ರಿಗಳ ಗುಂಪೊಂದರ ಜೊತೆಗೆ ಮಾತನಾಡಿದ ವೇಳೆ ಅವರು ಈ ಭರವಸೆ ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಭೇಟಿ ನೀಡುವ ವಿಷಯದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಧನಾತ್ಮಕ ಪ್ರತಿಕ್ರಿಯೆಯನ್ನು ಪಿಸಿಬಿ ನಿರೀಕ್ಷಿಸುತ್ತಿದೆ ಎಂದು ನಖ್ವಿ ಹೇಳಿದರು.
‘‘ನಾವು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷ ಟಿಕೆಟ್ ಕೋಟಗಳನ್ನು ಒದಗಿಸಲಿದ್ದೇವೆ ಮತ್ತು ಅವರಿಗೆ ಕ್ಷಿಪ್ರವಾಗಿ ವೀಸಾಗಳನ್ನು ನೀಡುವ ನೀತಿಯೊಂದನ್ನು ಜಾರಿಗೆ ತರಲಿದ್ದೇವೆ’’ ಎಂದು ನಖ್ವಿ ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.
ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಿ, ಲಾಹೋರ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯವನ್ನು ವೀಕ್ಷಿಸುವುದನ್ನು ನೋಡಲು ಪಿಸಿಬಿ ಬಯಸುತ್ತದೆ ಎಂದು ಅವರು ನುಡಿದರು.
ಐಸಿಸಿ ಚಾಂಪಿಯನ್ಸ್ ಟ್ರೋಫಿಯು 2025ರ ಫೆಬ್ರವರಿ-ಮಾರ್ಚ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯಲು ನಿಗದಿಯಾಗಿದೆ. ಆದರೆ, ಐಸಿಸಿಯು ಈವರೆಗೆ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿಲ್ಲ. ಪಂದ್ಯಾವಳಿಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ತೆರಳಲು ಭಾರತ ಸರಕಾರವು ತನ್ನ ತಂಡಕ್ಕೆ ಅನುಮತಿ ನೀಡುವುದನ್ನು ಐಸಿಸಿಯು ಕಾಯುತ್ತಿದೆ.
2008ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಹೋಗಿಲ್ಲ. 2007ರ ಬಳಿಕ, ಉಭಯ ತಂಡಗಳ ನಡುವೆ ಟೆಸ್ಟ್ ಸರಣಿ ನಡೆದಿಲ್ಲ.