ಟೆಸ್ಟ್ ವೈಫಲ್ಯಕ್ಕೆ ಡಬ್ಲ್ಯುಟಿಸಿ ಅಂಕಗಳ ಒತ್ತಡ, ಟಿ20 ಕ್ರಿಕೆಟ್ ಕಾರಣ : ಗಂಭೀರ್

Update: 2024-10-31 15:38 GMT

 ಗೌತಮ್ ಗಂಭೀರ್ | PC : ANI  

ಮುಂಬೈ : ತಂಡಗಳು ತವರಿನಲ್ಲಿ ಟೆಸ್ಟ್‌ಗಳಲ್ಲಿ ಸೋಲುವ ಇತ್ತೀಚಿನ ಪ್ರವೃತ್ತಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ (ಡಬ್ಲ್ಯುಟಿಸಿ)ನ ಅಂಕಗಳ ಒತ್ತಡವೇ ಕಾರಣ ಎಂದು ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ತನಗೆ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದೆ ಎಂದು ಹೇಳಿದರು.

ಟಿ20 ಕ್ರಿಕೆಟ್‌ನ ಒತ್ತಡದಿಂದಾಗಿ ತಂಡಗಳು ತವರಿನ ಟೆಸ್ಟ್‌ಗಳಲ್ಲಿ ಸೋಲುತ್ತಿವೆ ಎಂಬುದಾಗಿಯೂ ಅವರು ಅಭಿಪ್ರಾಯಪಟ್ಟರು.

‘‘ನನಗೆ ಡಬ್ಲ್ಯುಟಿಸಿ ಅಂಕಗಳು ಅತ್ಯಂತ ಮಹತ್ವದ್ದಾಗಿವೆ. ಪ್ರತಿಯೊಂದು ಟೆಸ್ಟ್ ಪಂದ್ಯವೂ ಮುಖ್ಯ. ಇನ್ನು ಮುಂದೆ ಮಹತ್ವವಿಲ್ಲದ ಪಂದ್ಯಗಳು (ಡೆಡ್ ರಬ್ಬರ್) ಅಂತ ಏನೂ ಇರುವುದಿಲ್ಲ. ಟೆಸ್ಟ್ ನಿರ್ವಹಣೆ ಮತ್ತು ಟಿ20 ಕ್ರಿಕೆಟ್ ನಡುವೆ ನೇರ ಸಂಬಂಧವಿದೆ. ಟೆಸ್ಟ್ ಪಂದ್ಯಗಳು ಡ್ರಾಗೊಳ್ಳುವ ದಿನಗಳು ಹೋದವು. ಯಾಕೆಂದರೆ ಬ್ಯಾಟರ್‌ ಗಳು ಮತ್ತು ಅವರ ಹೊಡೆತಗಳ ಗುಣಮಟ್ಟದಲ್ಲಿ ವೃದ್ಧಿಯಾಗಿದೆ. ಈಗ ಪಂದ್ಯಗಳು ಹೆಚ್ಚೆಚ್ಚು ಫಲಿತಾಂಶ ಕೇಂದ್ರಿತವಾಗಿವೆ. ಇದಕ್ಕೆ ಡಬ್ಲ್ಯುಟಿಸಿ ಅಂಕಗಳ ಒತ್ತಡ ಮತ್ತು ಟಿ20 ಕ್ರಿಕೆಟ್ ಕಾರಣ’’ ಎಂದು ಗೌತಮ್ ಗಂಭೀರ್ ಹೇಳಿದರು.

ಪ್ರತ್ಯೇಕ ಟೆಸ್ಟ್ ತಂಡ ಸಾಧ್ಯವೇ?

ಪ್ರತ್ಯೇಕ ಟೆಸ್ಟ್ ತಂಡದ ಬಗ್ಗೆ ಚರ್ಚಿಸುವುದು ಈ ಹಂತದಲ್ಲಿ ಊಹಾಪೋಹವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗಂಭೀರ್ ಹೇಳಿದರು. ಆದರೆ, ಟೆಸ್ಟ್ ಕ್ರಿಕೆಟ್‌ನ ಬೇಡಿಕೆಗಳನ್ನು ಪೂರೈಸಬಲ್ಲ ಬ್ಯಾಟರ್‌ ಗಳನ್ನು ಭಾರತ ಗುರುತಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

‘‘ಈ ಕ್ಷಣದಲ್ಲಿ ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಆದರೆ, ಮುಂದೆ ಸಹಜವಾಗಿಯೇ ಸದೃಢ ಕೆಂಪು ಚೆಂಡಿನ (ಟೆಸ್ಟ್) ಕ್ರಿಕೆಟಿಗರನ್ನು ನಾವು ಗುರುತಿಸುವುದು ಅನಿವಾರ್ಯವಾಗುತ್ತದೆ’’ ಎಂದು ಅವರು ನುಡಿದರು.

‘‘ಅಂತಿಮವಾಗಿ, ಫಲಿತಾಂಶ ಪಡೆಯಲು ಮೂರು ಅಥವಾ ನಾಲ್ಕು ದಿನಗಳು ಅಥವಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಐದು ದಿನಗಳ ಕಾಲ ನಾವು ಕಠಿಣ ಪರಿಶ್ರಮ ಪಡಬೇಕಾಗುತ್ತದೆ’’ ಎಂದು ಪ್ರಧಾನ ಕೋಚ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News