ಭಾರತ-ನ್ಯೂಝಿಲೆಂಡ್ ತೃತೀಯ ಟೆಸ್ಟ್ | ಶತಕ ತಪ್ಪಿಸಿಕೊಂಡ ಶುಭಮನ್ ಗಿಲ್: ಭಾರತ 263ಕ್ಕೆ ಆಲೌಟ್

Update: 2024-11-02 08:04 GMT

Photo : x/@bcci

ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ತಂಡದ ವಿರುದ್ಧದ ಮೂರನೆಯ ಟೆಸ್ಟ್ ಪಂದ್ಯದಲ್ಲಿ ಭಾರತವು 263 ರನ್ ಗೆ ಆಲೌಟ್ ಆಗಿದೆ.

ಎರಡನೇ ದಿನ ಇನ್ನಿಂಗ್ಸ್ ಮುಂದುವರೆಸಿದ ಭಾರತ ತಂಡದಲ್ಲಿ, ಶುಭಮನ್ ಗಿಲ್ ರಕ್ಷಣಾತ್ಮಕ ಆಟವಾಡಿದರು. ಗಿಲ್ ಅವರ 90 ರನ್ ಗಳ ನೆರವಿನಿಂದ ಭಾರತ ತಂಡವು ಹಿನ್ನಡೆಯಿಂದ ಪಾರಾಗಿದೆ. ಶುಭಮನ್ ಗಿಲ್ ಕೇವಲ 10 ರನ್ ಗಳಿಂದ ಶತಕ ವಂಚಿತರಾದರು.

ಮೊದಲ ದಿನದಾಟದಂತ್ಯಕ್ಕೆ ಕೇವಲ 86 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಹಿನ್ನಡೆ ಭೀತಿಗೆ ಒಳಗಾಗಿದ್ದ ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶುಭಮನ್ ಗಿಲ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಆಸರೆಯಾದರು.

ರಕ್ಷಣಾತ್ಮಕ ಮತ್ತು ಆಕ್ರಮಣ ಮಿಶ್ರಿತ ಬ್ಯಾಟಿಂಗ್ ಪ್ರದರ್ಶಿಸಿದ ಶುಭಮನ್ ಗಿಲ್, 146 ಬಾಲ್ ಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 90 ರನ್ ಗಳಿಸಿದರು. ಶತಕದತ್ತ ದಾಪುಗಾಲು ಹಾಕುತ್ತಿದ್ದ ಅವರ ವಿಕೆಟ್ ಅನ್ನು ಅಜಾಜ್ ಪಟೇಲ್ ಕಿತ್ತರು. ಡೇರಿಲ್ ಮಿಚೆಲ್ ಗೆ ಕ್ಯಾಚಿತ್ತು ಗಿಲ್ ನಿರ್ಗಮಿಸಿದರು.

ಮತ್ತೊಂದು ತುದಿಯಲ್ಲಿ ತಮ್ಮ ಎಂದಿನ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್, ಕೇವಲ 59 ಬಾಲ್ ಗಳನ್ನು ಎದುರಿಸಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ನೆರವಿನಿಂದ 60 ರನ್ ಕಲೆ ಹಾಕಿದರು. ತಂಡಕ್ಕೆ ಅಗತ್ಯವಾಗಿದ್ದ ಆಸರೆ ಒದಗಿಸಿದ ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಜೋಡಿಯು, 96 ರನ್ ಗಳ ಮಹತ್ವಪೂರ್ಣ ಜೊತೆಯಾಟವಾಡಿತು.

ರಿಷಭ್ ಪಂತ್ ನಿರ್ಗಮನದ ನಂತರ ಮತ್ತೆ ಕುಸಿತ ಅನುಭವಿಸಿದ ಭಾರತ ತಂಡ, ಕೇವಲ 67 ರನ್ ಗಳ ಅಂತರದಲ್ಲಿ 5 ವಿಕೆಟ್ ಗಳನ್ನು ಕಳೆದುಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News