ಡೇವಿಸ್ ಕಪ್: ಐಟಿಎಫ್ ನ್ಯಾಯಮಂಡಳಿಯಲ್ಲಿ ಭಾರತದ ಮನವಿ ತಿರಸ್ಕೃತ
ಹೊಸದಿಲ್ಲಿ: ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಡೇವಿಸ್ ಕಪ್ ವಿಶ್ವ ಗುಂಪು ಪ್ರಥಮ ಪ್ಲೇ-ಆಫ್ ಪಂದ್ಯದ ವೇಳೆ ಭಾರತೀಯ ಡೇವಿಸ್ ಕಪ್ ತಂಡಕ್ಕೆ ಭದ್ರತಾ ಅಪಾಯವಿದೆ ಎಂಬ ಅಖಿಲ ಭಾರತ ಟೆನಿಸ್ ಅಸೋಸಿಯೇಶನ್ (ಎಐಟಿಎ)ನ ಕಳವಳಗಳನ್ನು ಇಂಟರ್‌ನ್ಯಾಶನಲ್ ಟೆನಿಸ್ ಫೆಡರೇಶನ್ (ಐಟಿಎಫ್) ನ್ಯಾಯಮಂಡಳಿಯು ತಳ್ಳಿಹಾಕಿದೆ.
ಈ ನಿರ್ಧಾರದ ಹಿನ್ನೆಲೆಯಲ್ಲಿ, 60 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಹೋಗುವ ಸಾಧ್ಯತೆಯೊಂದು ಭಾರತೀಯ ಟೆನಿಸ್ ತಂಡಕ್ಕೆ ಎದುರಾಗಿದೆ.
ಇನ್ನು ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸದೆ ಇದ್ದರೆ, ಪಾಕಿಸ್ತಾನವನ್ನು ವಿಜೇತ ತಂಡವಾಗಿ ಘೋಷಿಸಲಾಗುವುದು. ಆಗ ಭಾರತೀಯ ತಂಡವು ವಿಶ್ವ ಗುಂಪು ದ್ವಿತೀಯ ಪ್ಲೇ ಆಫ್ ಮಟ್ಟಕ್ಕೆ ಇಳಿಯುವುದು.
ಕಳೆದ ಬಾರಿ ಭಾರತೀಯ ಡೇವಿಸ್ ಕಪ್ ತಂಡವು ಪಾಕಿಸ್ತಾನಕ್ಕೆ ಹೋಗಿದ್ದು 1964ರಲ್ಲಿ. ಅಂದು ಭಾರತವು 4-0 ಅಂತರದ ವಿಜಯ ಗಳಿಸಿತ್ತು.
‘‘ಎಐಟಿಎಯ ಮನವಿಯನ್ನು ಐಟಿಎಫ್ ನ್ಯಾಯಮಂಡಳಿ ತಿರಸ್ಕರಿಸಿದೆ ಎನ್ನುವ ಸುದ್ದಿ ಲಭಿಸಿದೆ. ನಾವು ಸೋಮವಾರ ಕ್ರೀಡಾ ಸಚಿವಾಲಯವನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯುತ್ತೇವೆ’’ ಎಂದು ಎಐಟಿಎ ಮಹಾಕಾರ್ಯದರ್ಶಿ ಅನಿಲ್ ದೂಪರ್ ಪಿಟಿಐಗೆ ತಿಳಿಸಿದ್ದಾರೆ.
ವಿಶ್ವ ಗುಂಪು ಪಥಮ ಪ್ಲೇಆಫ್ ಪಂದ್ಯಗಳು ಫೆಬ್ರವರಿ 3 ಮತ್ತು 4ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ.
ಭಾರತದ ಅಗ್ರ ಆಟಗಾರರಾದ ಸುಮಿತ್ ನಾಗಲ್ ಮತ್ತು ಶಶಿಕುಮಾರ್ ಮುಕುಂದ್ ಈ ಪಂದ್ಯದಿಂದ ಹಿಂದೆ ಸರಿದಿದ್ದರು.