2024ರ ಐಪಿಎಲ್‌ಗೂ ಮುನ್ನ CSK ನಾಯಕತ್ವ ತೊರೆದ ಎಂ.ಎಸ್.ಧೋನಿ: ಅಭಿಮಾನಿಗಳಿಗೆ ಶಾಕ್

Update: 2024-03-21 17:24 GMT

ಎಂ.ಎಸ್.‌ ಧೋನಿ (BCCI)

ಚೆನ್ನೈ, ಮಾ.21: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಲೆಜೆಂಡ್ ಆಟಗಾರ ಎಂ.ಎಸ್. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ತ್ಯಜಿಸಿದ್ದಾರೆ. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಚೆನ್ನೈ ತಂಡದ ನೂತನ ನಾಯಕನಾಗಿ ಗುರುವಾರ ನೇಮಕಗೊಂಡಿದ್ದಾರೆ.

ಐಪಿಎಲ್ ಆರಂಭಿಕ ಪಂದ್ಯಕ್ಕಿಂತ ಮೊದಲು ನಡೆದಿರುವ ಈ ಬೆಳವಣಿಗೆಯಿಂದ ಹಾಲಿ ಚಾಂಪಿಯನ್ ಚೆನ್ನೈ ತಂಡದ ಅಭಿಮಾನಿಗಳು ದಂಗಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸಿಎಸ್ಕೆ ತಂಡ ಸೆಣಸಾಡುವ ಮೊದಲು ಭಾರತೀಯ ಪ್ರೀಮಿಯರ್ ಲೀಗ್, ಎಕ್ಸ್ನಲ್ಲಿ ಪೋಸ್ಟ್ ಹಾಕಿ ಈ ಬೆಳವಣಿಗೆಯನ್ನು ಬಹಿರಂಗಪಡಿಸಿದೆ. ಐಪಿಎಲ್ ಟ್ರೋಫಿಯೊಂದಿಗೆ ಪೋಸ್ ನೀಡುತ್ತಿರುವ ಎಲ್ಲ ನಾಯಕರ ಫೋಟೊವನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಧೋನಿ ಬದಲಿಗೆ ಗಾಯಕ್ವಾಡ್ ಕಾಣಿಸಿಕೊಂಡಿದ್ದಾರೆ.

42ರ ವಯಸ್ಸಿನ ಎಂ.ಎಸ್. ಧೋನಿ 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಸಿಎಸ್ಕೆ ನಾಯಕನಾಗಿದ್ದಾರೆ. 2013ರಲ್ಲಿ ಸ್ಪಾಟ್ ಫಿಕ್ಸಿಂಗ್ನಲ್ಲಿ ಚೆನ್ನೈ 2 ವರ್ಷ ನಿಷೇಧಕ್ಕೆ ಒಳಗಾದಾಗ, 2022ರ ಆರಂಭದಲ್ಲಿ ಚೆನ್ನೈ ನಾಯಕತ್ವದಿಂದ ದೂರ ಉಳಿದಿದ್ದರು. 2023ರಲ್ಲಿ ಐದನೇ ಬಾರಿ ಐಪಿಎಲ್ ಪ್ರಶಸ್ತಿ ಜಯಿಸಿ ಮುಂಬೈ ಇಂಡಿಯನ್ಸ್ ತಂಡದ ಸಾಧನೆಯನ್ನು ಸರಿಗಟ್ಟಿದ್ದಾರೆ.

212 ಐಪಿಎಲ್ ಪಂದ್ಯಗಳಲ್ಲಿ ಸಿಎಸ್ಕೆ ನಾಯಕತ್ವವಹಿಸಿದ್ದ ಧೋನಿ 128ರಲ್ಲಿ ಜಯ ಹಾಗೂ 82ರಲ್ಲಿ ಸೋಲು ಅನುಭವಿಸಿದ್ದರು.

ಗಾಯಕ್ವಾಡ್ ಭಾರತದ ಪರ ಆರು ಏಕದಿನ ಹಾಗೂ 19 ಟಿ-20 ಪಂದ್ಯಗಳನ್ನು ಆಡಿದ್ದಾರೆ. 2020ರಲ್ಲಿ ಸಿಎಸ್ಕೆ ಪರ ಚೊಚ್ಚಲ ಪಂದ್ಯ ಆಡಿದ್ದರು. ಸಿಎಸ್ಕೆ ಪರ 52 ಪಂದ್ಯಗಳನ್ನು ಆಡಿರುವ ಗಾಯಕ್ವಾಡ್ 1,797 ರನ್ ಗಳಿಸಿದ್ದಾರೆ. ಬಲಗೈ ಆರಂಭಿಕ ಆಟಗಾರ ಕಳೆದ ವರ್ಷ 16 ಪಂದ್ಯಗಳಲ್ಲಿ ಒಟ್ಟು 590 ರನ್ ಗಳಿಸಿ ಸ್ಮರಣೀಯ ಪ್ರದರ್ಶನ ನೀಡಿದ್ದರು.

ಟಾಟಾ ಐಪಿಎಲ್ 2024 ಆರಂಭಕ್ಕೆ ಮೊದಲು ಧೋನಿ ಅವರು ಋತುರಾಜ್ ಗಾಯಕ್ವಾಡ್ಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಹಸ್ತಾಂತರಿಸಿದ್ದಾರೆ. ಋತುರಾಜ್ 2019ರಿಂದ ಚೆನ್ನೈ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಧೋನಿ ಈ ಋತುವಿನ ಅಂತ್ಯಕ್ಕೆ ನಿವೃತ್ತಿಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಫ್ರಾಂಚೈಸಿಯು ಧೋನಿ ಆಟಗಾರನಾಗಿ ಉಪಸ್ಥಿತರಿರುವಾಗಲೇ ನಾಯಕತ್ವವನ್ನು ಗಾಯಕ್ವಾಡ್ಗೆ ಸುಗಮವಾಗಿ ಹಸ್ತಾಂತರಿಸಲು ಮುಂದಾಗಿದೆ.

ಧೋನಿ 2020ರ ಆಗಸ್ಟ್ 15ರಂದು ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು.

ಕ್ರೀಡಾ ಇತಿಹಾಸದಲ್ಲಿ ಧೋನಿ ಅವರ ಕ್ರಿಕೆಟ್ ವೃತ್ತಿಜೀವನ ಎಲ್ಲರಿಗೂ ಸ್ಫೂರ್ತಿದಾಯಕ. ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದ ಅವರು ಭಾರತ ಕ್ರಿಕೆಟ್ ತಂಡ 2007ರಲ್ಲಿ ಟಿ-20 ವಿಶ್ವಕಪ್, 2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿ ನಾಯಕತ್ವವಹಿಸಿದ್ದರು.

ಸಿಎಸ್ಕೆ 2010, 2011,2018, 2021 ಹಾಗೂ 2013ರಲ್ಲಿ ಐದು ಬಾರಿ ಪ್ರಶಸ್ತಿಗಳನ್ನು ಜಯಿಸಲು ಧೋನಿ ತಂಡದ ನಾಯಕತ್ವವಹಿಸಿದ್ದರು. 2010 ಹಾಗೂ 2014ರಲ್ಲಿ ಸಿಎಸ್ಕೆ ಎರಡು ಬಾರಿ ಸಿಎಲ್ಟಿ20 ಪ್ರಶಸ್ತಿಗಳನ್ನು ಗೆಲ್ಲುವಲ್ಲು ಕೂಡ ಧೋನಿ ಕಾರಣರಾಗಿದ್ದರು. ಹೀಗಾಗಿ ಧೋನಿ ಅವರು ಚೆನ್ನೈ ಫ್ರಾಂಚೈಸಿಯ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ.

ಬಲಗೈ ಬ್ಯಾಟರ್ ಧೋನಿ 250 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಹೆಚ್ಚಿನ ಪಂದ್ಯಗಳನ್ನು ಸಿಎಸ್ಕೆ ಪರವಾಗಿಯೇ ಆಡಿದ್ದಾರೆ. 2016ರಿಂದ 2017ರ ತನಕ ರೈಸಿಂಗ್ ಪುಣೆ ಸೂಪರ್ಜಯಂಟ್ ಪರ ಆಡಿದ್ದರು. ಈ ಎಲ್ಲ ಪಂದ್ಯಗಳಲ್ಲಿ ಅವರು 38.79ರ ಸರಾಸರಿಯಲ್ಲಿ 5,082 ರನ್ ಗಳಿಸಿದ್ದರು. ಟೂರ್ನಮೆಂಟ್ನಲ್ಲಿ 24 ಅರ್ಧಶತಕಗಳನ್ನು ಗಳಿಸಿದ್ದರು. 142 ಕ್ಯಾಚ್ಗಳು ಹಾಗೂ 42 ಸ್ಟಂಪಿಂಗ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News