ಎಕಾನಮಿ ದರ್ಜೆಯಲ್ಲಿ ಧೋನಿ ಪ್ರಯಾಣ | ಸರಳತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಭಿಮಾನಿಗಳು
ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಎಕಾನಮಿ (ಸಾಮಾನ್ಯ) ದರ್ಜೆಯಲ್ಲಿ ಪ್ರಯಾಣಿಸಿರುವುದು ಅವರ ಅಭಿಮಾನಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಧೋನಿ ವಿಮಾನದಲ್ಲಿ ತನ್ನ ಚೀಲವನ್ನು ತನ್ನ ಆಸನದ ಮೇಲ್ಭಾಗದಲ್ಲಿರುವ ಕಂಪಾರ್ಟ್‌ಮೆಂಟ್‌ನಲ್ಲಿ ಇಟ್ಟು ಬಳಿಕ ಕುಳಿತುಕೊಳ್ಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿದೆ. ವಿಮಾನದ ಇತರ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ದೃಶ್ಯವನ್ನು ಚಿತ್ರಿಸಿಕೊಂಡರು. ಧೋನಿ ತನ್ನ ಆಸನದಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ, ವಿಮಾನದ ಆ ಕ್ಯಾಬಿನ್‌ನಲ್ಲಿ ಏಕಕಾಲದಲ್ಲಿ ಕರತಾಡನ ವ್ಯಕ್ತವಾಯಿತು. ಆ ಮೂಲಕ ಅಭಿಮಾನಿಗಳು ಧೋನಿ ಉಪಸ್ಥಿತಿಯನ್ನು ಸಂಭ್ರಮಿಸಿದರು ಮತ್ತು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
Recent Video Of Mahi While Travelling From Bengaluru to Ranchi #MSDhoni pic.twitter.com/X9sJv1Qz0J
— Chakri Dhoni (@ChakriDhoni17) May 23, 2024
ಸಾಮಾಜಿಕ ಮಾಧ್ಯಮಗಳಲ್ಲಿಯೂ ಧೋನಿ ಬಗ್ಗೆ ಅಪಾರ ಮೆಚ್ಚುಗೆಯ ಮಾತುಗಳು ವ್ಯಕ್ತವಾದವು. ಹೆಚ್ಚಿನವರು ಅವರ ಸರಳತೆಯನ್ನು ಪ್ರಶಂಸಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಈ ಬಾರಿ ಧೋನಿಯ ತಂಡ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ-ಆಫ್ ಹಂತ ತಲುಪುವಲ್ಲಿ ವಿಫಲವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ಸೋಲುವುದರೊಂದಿಗೆ ಅದು ಕೂಟದಿಂದ ಹೊರಬಿದ್ದಿದೆ.