ಐಪಿಎಲ್ಗೆ ದಿನೇಶ್ ಕಾರ್ತಿಕ್ ವಿದಾಯ; RCB ಆಟಗಾರರಿಂದ ವಿಶೇಷ ಗೌರವ
ಅಹಮದಾಬಾದ್: ಮೇ 22ರಂದು ರಾಜಸ್ಥಾನ್ ರಾಯಲ್ಸ್ ತಂಡದೆದುರು ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪರಾಭವಗೊಂಡ ಬೆನ್ನಿಗೇ, ಆ ತಂಡದ ತಾರಾ ಬ್ಯಾಟರ್ ಆಗಿದ್ದ ದಿನೇಶ್ ಕಾರ್ತಿಕ್ ಐಪಿಎಲ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಈ ಐಪಿಎಲ್ ಋತುವೇ ನನ್ನ ಕೊನೆಯ ಐಪಿಎಲ್ ಕ್ರೀಡಾಕೂಟ ಎಂಬ ಕುರಿತು ಈ ಮುನ್ನವೇ ಸುಳಿವು ನೀಡಿದ್ದ ದಿನೇಶ್ ಕಾರ್ತಿಕ್ ಅವರಿಗೆ ಅಹಮದಾಬಾದ್ ನಲ್ಲಿ ಪಂದ್ಯ ಮುಕ್ತಾಯಗೊಂಡ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ವಿಶೇಷ ಗೌರವ ನೀಡಿ ಬೀಳ್ಕೊಡುಗೆ ನೀಡಿದರು.
ಐಪಿಎಲ್ ಕ್ರೀಡಾಕೂಟಕ್ಕೆ ತಮ್ಮ ವಿದಾಯವನ್ನು ಸ್ವತಃ ದಿನೇಶ್ ಕಾರ್ತಿಕ್ ಅವರೇ ಘೋಷಿಸದಿದ್ದರೂ, ಕ್ರೀಡಾಕೂಟದ ಪ್ರಸಾರ ವಾಹಿನಿಯು ಪಂದ್ಯ ಮುಕ್ತಾಯಗೊಂಡ ನಂತರ ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ದೃಢಪಡಿಸಿತು. 16 ವರ್ಷಗಳ ಹಿಂದೆ ಟಿ-20 ಮಾದರಿ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ದಿನೇಶ್ ಕಾರ್ತಿಕ್ ಅವರನ್ನು ಈ ಮಾದರಿ ಕ್ರಿಕೆಟ್ ನ ಅತ್ಯುತ್ತಮ ಆಟಗಾರ ಎಂದೇ ಪರಿಗಣಿಸಲಾಗಿದೆ.
ಪಂದ್ಯ ಮುಕ್ತಾಯಗೊಂಡ ನಂತರ ತಮ್ಮ ಕೈಗವಸುಗಳನ್ನು ಹೊರ ತೆಗೆದ ದಿನೇಶ್ ಕಾರ್ತಿಕ್, ತಮ್ಮ ಅಭಿಮಾನಿಗಳತ್ತ ಕೈಬೀಸಿದರು. ಇದೇ ವೇಳೆ ಕ್ರೀಡಾಂಗಣವನ್ನು ಸುತ್ತುವರಿದ RCB ಆಟಗಾರರು ತಮಗೆ ಬೆಂಬಲ ನೀಡಿದ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದರು. ವಿರಾಟ್ ಕೊಹ್ಲಿ ದಿನೇಶ್ ಕಾರ್ತಿಕ್ ಅವರನ್ನು ತಬ್ಬಿಕೊಂಡು ಅಭಿನಂದಿಸಿದ ಕ್ಷಣ ಹೃದಯಸ್ಪರ್ಶಿಯಾಗಿತ್ತು. ದಿನೇಶ್ ಕಾರ್ತಿಕ್ ಅವರು ಡ್ರೆಸ್ಸಿಂಗ್ ಕೊಠಡಿಯತ್ತ ಹೆಜ್ಜೆ ಹಾಕಿದಾಗ, ಆರ್ಸಿಬಿ ಆಟಗಾರರು ಅವರಿಗೆ ವಿಶೇಷ ಗೌರವ ನೀಡುವ ಮೂಲಕ ಬೀಳ್ಕೊಡುಗೆ ನೀಡಿದರು.
ಐಪಿಎಲ್ ಕ್ರೀಡಾಕೂಟದಲ್ಲಿ ಈವರೆಗೆ 257 ಪಂದ್ಯಗಳನ್ನು ಆಡಿರುವ ದಿನೇಶ್ ಕಾರ್ತಿಕ್, ಒಟ್ಟು 4,842 ರನ್ ಗಳನ್ನು ಗಳಿಸಿದ್ದಾರೆ. ಈ ಮೊತ್ತವು 22 ಅರ್ಧ ಶತಕಗಳನ್ನು ಒಳಗೊಂಡಿದೆ. ತಮ್ಮ 17 ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ ದಿನೇಶ್ ಕಾರ್ತಿಕ್ ಡೆಲ್ಲಿ ಡೇರ್ ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್), ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಒಟ್ಟು ಆರು ಫ್ರಾಂಚೈಸಿಗಳ ಪರವಾಗಿ ಆಟವಾಡಿದ್ದಾರೆ. ಹಾಲಿ ಐಪಿಎಲ್ ಕ್ರೀಡಾಕೂಟದಲ್ಲಿ ಒಟ್ಟು 15 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್, 36.22 ರನ್ ರೇಟ್ ಹಾಗೂ 187.36 ಸ್ಟ್ರೈಕ್ ರೇಟ್ ನೊಂದಿಗೆ ಒಟ್ಟು 326 ರನ್ ಗಳಿಸಿದ್ದಾರೆ.