ಅಫ್ಘಾನಿಸ್ತಾನದ ಗೆಲುವಿನಿಂದ ಪಾಕಿಸ್ತಾನದ ಸೆಮಿಫೈನಲ್ ಕನಸಿನ ಮೇಲೆ ಏನು ಪರಿಣಾಮ ಗೊತ್ತೇ?
ಲಕ್ನೋ: ಉತ್ತರ ಪ್ರದೇಶದ ರಾಜಧಾನಿಯಲ್ಲಿ ಶುಕ್ರವಾರ ನಡೆದ ವಿಶ್ವಕಪ್ ಪಂದ್ಯಾವಳಿಯ ಗುಂಪು ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನ, ನೆದರ್ಲೆಂಡ್ಸ್ ವಿರುದ್ಧ ಏಳು ವಿಕೆಟ್ ಗಳ ನಿರಾಯಾಸದ ಗೆಲುವು ಸಂಪಾದಿಸಿದೆ. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ, ಪಾಕಿಸ್ತಾನವನ್ನು ಆರನೇ ಸ್ಥಾನಕ್ಕೆ ತಳ್ಳಿ ಐದನೇ ಸ್ಥಾನಕ್ಕೇರಿದೆ.
ಏಳು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು, ಎಂಟು ಅಂಕ ಸಂಪಾದಿಸಿರುವ ಅಫ್ಘಾನಿಸ್ತಾನ ಅಷ್ಟೇ ಅಂಕ ಪಡೆದಿರುವ ನ್ಯೂಜಿಲೆಂಡ್ ಗಿಂತ ಕಡಿಮೆ ನಿವ್ವಳ ರನ್ ರೇಟ್ ಹೊಂದಿರುವ ಕಾರಣಕ್ಕೆ ಅಗ್ರ ನಾಲ್ಕರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಈ ಮಧ್ಯೆ ಏಳು ಪಂದ್ಯಗಳಲ್ಲಿ ಮೂರನ್ನು ಮಾತ್ರ ಗೆದ್ದಿರುವ ಪಾಕಿಸ್ತಾನ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಆರು ಪಂದ್ಯಗಳನ್ನಷ್ಟೇ ಆಡಿರುವ ಆಸ್ಟ್ರೇಲಿಯಾ ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ವಿಶ್ವಕಪ್ ನಲ್ಲಿ ಅಜೇಯ ಅಭಿಯಾನ ಮುಂದುವರಿಸಿರುವ ಭಾರತ 14 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಒಂದು ಪಂದ್ಯವನ್ನಷ್ಟೇ ಸೋತಿರುವ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ.
ಅಫ್ಘಾನಿಸ್ತಾನ ತನ್ನ ಉಳಿದ ಎರಡು ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದು, ಎರಡೂ ಪಂದ್ಯಗಳನ್ನು ಗೆದ್ದಲ್ಲಿ 12 ಅಂಕ ಸಂಪಾದಿಸುತ್ತದೆ. ನ್ಯೂಝಿಲೆಂಡ್ ಕೂಡಾ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ಅದು ಕೂಡಾ 12 ಅಂಕ ಸಂಪಾದಿಸಲಿದ್ದು, ನಾಲ್ಕನೇ ಸ್ಥಾನವನ್ನು ರನ್ ರೇಟ್ ಆಧಾರದಲ್ಲಿ ನಿರ್ಧರಿಸಬೇಕಾಗುತ್ತದೆ.
ಆಸ್ಟ್ರೇಲಿಯಾ ಆಡುವ ಪಂದ್ಯಗಳ ಫಲಿತಾಂಶದ ಆಧಾರದಲ್ಲಿ ನ್ಯೂಝಿಲೆಂಡ್ ಹಾಗೂ ಅಫ್ಘಾನಿಸ್ತಾನಕ್ಕೆ ಕೂಡಾ ಸೆಮಿಫೈನಲ್ ಅವಕಾಶವಿದೆ. ಆಸ್ಟ್ರೇಲಿಯಾಗೆ ಮೂರು ಪಂದ್ಯಗಳು ಬಾಕಿ ಇದ್ದು, ಒಂದು ಅಫ್ಘಾನಿಸ್ತಾನದ ವಿರುದ್ಧ ಆಡಬೇಕಿದೆ.
ಆದರೆ ಶುಕ್ರವಾರದ ಫಲಿತಾಂಶ ಪಾಕಿಸ್ತಾನದ ಸೆಮಿಫೈನಲ್ ಕನಸನ್ನು ಬಹುತೇಕ ನುಚ್ಚುನೂರು ಮಾಡಿದೆ. ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೂ, ಪಾಕಿಸ್ತಾನ 10 ಅಂಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಹಾಗೂ ಅಫ್ಘಾನಿಸ್ತಾನದ ಪ್ರದರ್ಶನವನ್ನು ಅವಲಂಬಿಸಿ ಕ್ಷೀಣ ಅವಕಾಶ ಮಾತ್ರ ಪಾಕಿಸ್ತಾನಕ್ಕೆ ಇದ್ದು, ಎಲ್ಲ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದರೆ ಮಾತ್ರವೇ ಪಾಕಿಸ್ತಾನದ ಸೆಮಿಫೈನಲ್ ಅವಕಾಶ ಜೀವಂತ ಇರುತ್ತದೆ.