ದಕ್ಷಿಣ ವಲಯದ ಮಡಿಲಿಗೆ ದುಲೀಪ್ ಟ್ರೋಫಿ
ಬೆಂಗಳೂರು, ಜು.16: ಕನ್ನಡಿಗ ವಾಸುಕಿ ಕೌಶಿಕ್(4-36) ಹಾಗೂ ಚೆನ್ನೈ ಎಡಗೈ ಸ್ಪಿನ್ನರ್ ಸಾಯಿ ಕಿಶೋರ್(4-57) ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ದಕ್ಷಿಣ ವಲಯ ಕ್ರಿಕೆಟ್ ತಂಡವು ದುಲೀಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ರವಿವಾರ ಮುಕ್ತಾಯವಾದ ಫೈನಲ್ ನಲ್ಲಿ 75 ರನ್ ಗಳಿಂದ ಪಶ್ಚಿಮ ವಲಯ ತಂಡವನ್ನು ಸೋಲಿಸಿದ ಹನುಮ ವಿಹಾರಿ ನೇತೃತ್ವದ ದಕ್ಷಿಣ ವಲಯ ತಂಡವು ಮಿಂಚುವ ಟ್ರೋಫಿಗೆ ಮುತ್ತಿಕ್ಕಿತು.
ಇದರೊಂದಿಗೆ ಕಳೆದ ವರ್ಷದ ಫೈನಲ್ ನಲ್ಲಿ ಪಶ್ಚಿಮ ವಲಯ ತಂಡದ ವಿರುದ್ಧ ಸೋಲಿಗೆ ಸೇಡನ್ನು ತೀರಿಸಿಕೊಂಡಿತು. ದಕ್ಷಿಣ ವಲಯ ತಂಡ 14ನೇ ದುಲೀಪ್ ಟ್ರೋಫಿ ಜಯಿಸಿದ ಸಾಧನೆ ಮಾಡಿತು.
ಪಂದ್ಯದ 4ನೇ ದಿನವಾದ ಶನಿವಾರ ಪಶ್ಚಿಮ ವಲಯ ತಂಡವು 298 ರನ್ ಗುರಿ ಬೆನ್ನಟ್ಟಿತು. ಕೊನೆಯ ದಿನವಾದ ರವಿವಾರ ತನ್ನ 2ನೇ ಇನಿಂಗ್ಸ್ನಲ್ಲಿ 222 ರನ್ ಗಳಿಸಿ ಆಲೌಟಾಗಿ ಸೋಲೊಪ್ಪಿಕೊಂಡಿತು.
ನಾಯಕ ಪ್ರಿಯಾಂಕ್ ಪಾಂಚಾಲ್(95 ರನ್)ಹಾಗೂ ಸರ್ಫರಾಝ್ ಖಾನ್(48 ರನ್)ಗೆಲುವಿಗಾಗಿ ವಿಫಲ ಯತ್ನ ನಡೆಸಿದರು. ಇನ್ನೋರ್ವ ಕನ್ನಡಿಗ ವಿದ್ವತ್ ಕಾವೇರಪ್ಪ ಫೈನಲ್ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಗಳನ್ನು ಕಬಳಿಸಿದ್ದಕ್ಕೆ(7/53, 1/51)ಪಂದ್ಯಶ್ರೇಷ್ಠ ಹಾಗೂ ಸರಣಿಯಲ್ಲಿ ಒಟ್ಟು 15 ವಿಕೆಟ್ ಕಬಳಿಸಿರುವುದಕ್ಕೆ ಸರಣಿಶ್ರೇಷ್ಟ ಪ್ರಶಸ್ತಿ ಬಾಚಿಕೊಂಡರು.
.