ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಗೆಲುವು | ದಕ್ಷಿಣ ಆಫ್ರಿಕಾ ಸೆಮಿ ಫೈನಲ್‌ ಗೆ

Update: 2025-03-01 21:59 IST
ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಗೆಲುವು | ದಕ್ಷಿಣ ಆಫ್ರಿಕಾ ಸೆಮಿ ಫೈನಲ್‌ ಗೆ

PC : PTI 

  • whatsapp icon

ಕರಾಚಿ: ಇಂಗ್ಲೆಂಡ್ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಸೋಲಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದು ನಿರೀಕ್ಷೆಯಂತೆಯೇ ಸೆಮಿ ಫೈನಲ್‌ ಗೆ ಲಗ್ಗೆ ಇಟ್ಟಿದೆ.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ದಕ್ಷಿಣ ಆಫ್ರಿಕಾ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲರು 38.2 ಓವರ್‌ಗಳಲ್ಲಿ ಕೇವಲ 179 ರನ್ ಗಳಿಸಿ ಆಲೌಟಾದರು.

ಸೆಮಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಸುಲಭ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡವು 29.1 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಒಟ್ಟು ಐದು ಅಂಕ(ಆಸ್ಟ್ರೇಲಿಯಕ್ಕಿಂತ ಎರಡು ಅಂಕ ಹೆಚ್ಚು)ಗಳಿಸಿ ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನಕ್ಕೇರಿತು.

ದಕ್ಷಿಣ ಆಫ್ರಿಕಾ ತಂಡವು ಸೆಮಿ ಫೈನಲ್ ಸುತ್ತಿನಲ್ಲಿ ‘ಎ’ ಗುಂಪಿನಲ್ಲಿ 2ನೇ ಸ್ಥಾನ ಪಡೆಯಲಿರುವ ತಂಡವನ್ನು ಎದುರಿಸಲಿದೆ. ಭಾರತ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ರವಿವಾರ ದುಬೈನಲ್ಲಿ ‘ಎ’ ಗುಂಪಿನಲ್ಲಿ ಕೊನೆಯ ಪಂದ್ಯವನ್ನಾಡಲಿವೆ.

ರಾಸ್ಸಿ ವಾನ್‌ಡರ್ ಡುಸ್ಸೆನ್ ಔಟಾಗದೆ 72 ರನ್(87 ಎಸೆತ, 6 ಬೌಂಡರಿ, 3 ಸಿಕ್ಸರ್)ಗಳಿಸಿ ರನ್ ಚೇಸ್‌ಗೆ ಬಲ ತುಂಬಿದರು. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ವಾಪಸಾಗಿರುವ ವಿಕೆಟ್‌ಕೀಪರ್-ಬ್ಯಾಟರ್ ಹೆನ್ರಿಕ್ ಕ್ಲಾಸೆನ್ 56 ಎಸೆತಗಳಲ್ಲಿ 11ಬೌಂಡರಿಗಳ ಸಹಿತ 64 ರನ್ ಗಳಿಸಿದ್ದು, ಡುಸ್ಸೆನ್‌ರೊಂದಿಗೆ 3ನೇ ವಿಕೆಟ್‌ಗೆ 127 ರನ್ ಜೊತೆಯಾಟ ನಡೆಸಿದರು.

ಕೊನೆಯಬಾರಿ ಇಂಗ್ಲೆಂಡ್ ತಂಡವನ್ನು ನಾಯಕನಾಗಿ ಮುನ್ನಡೆಸಿದ ಜೋಸ್ ಬಟ್ಲರ್, ‘‘ಇದು ನಿಜವಾಗಿಯೂ ನಿರಾಶಾದಾಯಕ ಪ್ರದರ್ಶನ. ಪಿಚ್ ಸ್ವಲ್ಪ ಮಂದಗತಿಯಲ್ಲಿತ್ತು. ಬೆನ್ ಡಕೆಟ್ ಹಾಗೂ ಜೋ ರೂಟ್‌ನಮ್ಮನ್ನು ಉತ್ತಮ ಸ್ಥಿತಿಯಲ್ಲಿರಿಸಲು ಯತ್ನಿಸಿದರು. ಬಹುತೇಕ ಬ್ಯಾಟರ್‌ಗಳು ಏಕೆ ಫಾರ್ಮ್‌ನಲ್ಲಿಲ್ಲ ಎಂದು ನನಗೆ ಗೊತ್ತಿಲ್ಲ. ಇದೀಗ ಕಠಿಣ ಶ್ರಮಪಡುವ ಸಮಯ ಬಂದಿದೆ. ತಂಡವನ್ನು ಮರುಕಟ್ಟುವ ಪ್ರಕ್ರಿಯೆಯಲ್ಲಿ ಎಲ್ಲರೂ ನೆರವಾಗಬೇಕಾಗಿದೆ’’ ಎಂದರು.

ಎರಡು ಅದ್ಭುತ ಕ್ಯಾಚ್ ಸಹಿತ ಬೌಲಿಂಗ್‌ನಲ್ಲೂ ಮಿಂಚಿದ್ದ ಮಾರ್ಕೊ ಜಾನ್ಸನ್(3-39) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

*ಇಂಗ್ಲೆಂಡ್ 179 ರನ್: ಸೆಮಿ ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿರುವ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿ 38.2 ಓವರ್‌ಗಳಲ್ಲಿ 179 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಇಂಗ್ಲೆಂಡ್ ಪರ ಜೋ ರೂಟ್(37 ರನ್, 44 ಎಸೆತ, 4 ಬೌಂಡರಿ, 1 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಬೌಲರ್ ಜೋಫ್ರಾ ಆರ್ಚರ್(25 ರನ್, 31 ಎಸೆತ), ಆರಂಭಿಕ ಬ್ಯಾಟರ್ ಬೆನ್ ಡಕೆಟ್(24 ರನ್,21 ಎಸೆತ)ಹಾಗೂ ನಾಯಕ ಜೋಸ್ ಬಟ್ಲರ್(21 ರನ್, 43 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

3ನೇ ಕ್ರಮಾಂಕದ ಬ್ಯಾಟರ್ ಜಮಿ ಸ್ಮಿತ್ ಸೊನ್ನೆ ಸುತ್ತಿದರು. ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ 8 ರನ್, ಲಿವಿಂಗ್‌ಸ್ಟೋನ್ 9 ರನ್ ಹಾಗೂ ಓವರ್ಟನ್ 11 ರನ್ ಗಳಿಸಲಷ್ಟೇ ಶಕ್ತರಾದರು.

ದಕ್ಷಿಣ ಆಫ್ರಿಕಾದ ಪರ ಮಾರ್ಕೊ ಜಾನ್ಸನ್(3-39) ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಕೇಶವ ಮಹಾರಾಜ್(2-35)ಎರಡು ವಿಕೆಟ್ ಕಬಳಿಸಿದರು. ಲುಂಗಿ ಗಿಡಿ(1-33) ಹಾಗೂ ಕಾಗಿಸೊ ರಬಾಡ(1-42) ತಲಾ ಒಂದು ವಿಕೆಟ್ ಪಡೆದರು. ಜಾನ್ಸನ್ ಮೊದಲ 3 ವಿಕೆಟ್‌ಗಳನ್ನು ಪಡೆದರೆ, ಕೇಶವ ಮಹಾರಾಜ್ ಮಧ್ಯಮ ಓವರ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ವಿಯಾನ್ ಇಂಗ್ಲೆಂಡ್ ತಂಡದ ಬಾಲ ಕತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News