‘ಮರೆತು’ ಸಹ ಆಟಗಾರರ ಜರ್ಸಿಯನ್ನುಟ್ಟು ಮೈದಾನಕ್ಕೆ ಇಳಿದ ಇಂಗ್ಲೆಂಡ್ ಕ್ರಿಕೆಟಿಗರು!
ಲಂಡನ್ : ಆ್ಯಶಸ್ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದ ಮೂರನೇ ದಿನವಾದ ಶನಿವಾರ ವಿಲಕ್ಷಣ ಘಟನೆಯೊಂದಕ್ಕೆ ಪ್ರೇಕ್ಷಕರು ಸಾಕ್ಷಿಯಾದರು. ಇಂಗ್ಲೆಂಡ್ ಕ್ರಿಕೆಟಿಗರು ಬೇರೆಯವರ ಜರ್ಸಿಗಳನ್ನು ಧರಿಸಿಕೊಂಡು ಮೈದಾನಕ್ಕೆ ಇಳಿದಿದ್ದರು! ಆದರೆ, ‘ಡೆಮೆನ್ಶಿಯ’ ಕಾಯಿಲೆ (ಮರೆವು, ಏಕಾಗ್ರತೆಯ ಕೊರತೆಗೆ ಕಾರಣವಾಗುವ ಕಾಯಿಲೆ)ಯಿಂದ ಬಳಲುತ್ತಿರುವವರಿಗೆ ಬೆಂಬಲ ನೀಡುವ ಉದ್ದೇಶದಿಂದ ಆಟಗಾರರು ಬೇರೆ ಆಟಗಾರರ ಹೆಸರುಗಳುಳ್ಳ ಜರ್ಸಿಗಳನ್ನು ಧರಿಸಿಕೊಂಡು ಮೈದಾನಕ್ಕೆ ಇಳಿದಿದ್ದರು.
ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್ರ ಹೆಸರು ಹೊಂದಿದ ಜರ್ಸಿ ಧರಿಸಿದ್ದರು. ಜಾನಿ ಬೇರ್ಸ್ಟೋ, ಬೆಸ್ ಸ್ಟೋಕ್ಸ್ ಹೆಸೆರುಳ್ಳ ಜರ್ಸಿ ಹಾಕಿದ್ದರು. ಅದೇ ರೀತಿ, ಮೊಯೀನ್ ಅಲಿ, ಕ್ರಿಸ್ ವೋಕ್ಸ್ ಹೆಸರುಳ್ಳ ಜರ್ಸಿ ಧರಿಸಿದ್ದರು. ಡೆಮೆನ್ಶಿಯದಿಂದ ಬಳಲುತ್ತಿರುವವರು ಒಳಗಾಗುವ ಗೊಂದಲವನ್ನು ಆಟಗಾರರು ಈ ಮೂಲಕ ಸಾಂಕೇತಿಕವಾಗಿ ಬಿಂಬಿಸಿದ್ದಾರೆ. ಈ ನಿರ್ಧಾರವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಅಲ್ಝೈಮರ್ಸ್ ಸೊಸೈಟಿ ಜಂಟಿಯಾಗಿ ತೆಗೆದುಕೊಂಡಿದೆ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಮಾರ್ಕಸ್ ಟ್ರೆಸ್ಕೋತಿಕ್ ಸುದ್ದಿಗಾರರಿಗೆ ತಿಳಿಸಿದರು. ‘‘ಅಲ್ಝೈಮರ್ಸ್ ಸೊಸೈಟಿಗೆ ಬೆಂಬಲ ನೀಡುವುದಕ್ಕಾಗಿ ನಾವಿಲ್ಲಿದ್ದೇವೆ. ಇದು ನಮ್ಮ ಹೃದಯಗಳಿಗೆ ಅತ್ಯಂತ ಹತ್ತಿರವಾಗಿರುವ ವಿಷಯ. ಇದೊಂದು ಭಯಾನಕ ಕಾಯಿಲೆ’’ ಎಂದು ಅವರು ಹೇಳಿದರು.