ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ | ಮಸೂದ್, ಶಫೀಕ್ ಶತಕ, ಪಾಕಿಸ್ತಾನ 328/4
ಮುಲ್ತಾನ್ : ನಾಯಕ ಶಾನ್ ಮಸೂದ್(151 ರನ್, 177 ಎಸೆತ)ಹಾಗೂ ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್(102 ರನ್, 184 ಎಸೆತ)ಶತಕದ ಸಹಾಯದಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಸೋಮವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತ ಕಲೆ ಹಾಕಿದೆ.
ಮೊದಲ ದಿನದಾಟದಂತ್ಯಕ್ಕೆ ಪಾಕಿಸ್ತಾನ ತಂಡವು 86 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 328 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡವು ಸಯೀಮ್ ಅಯ್ಯೂಬ್ (4ರನ್)ವಿಕೆಟನ್ನು ಬೇಗನೆ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಶಫೀಕ್ ಹಾಗೂ ಮಸೂದ್ ಎರಡನೇ ವಿಕೆಟ್‌ಗೆ 253 ರನ್ ಸೇರಿಸಿ ತಂಡವನ್ನು ಆಧರಿಸಿದರು. ಆದರೆ ಈ ಇಬ್ಬರು ಆಟಗಾರರು ಬೆನ್ನು ಬೆನ್ನಿಗೆ ಔಟಾದರು.
ಅಟ್ಕಿನ್ಸನ್(2-70)ಶಫೀಕ್ ವಿಕೆಟ್ ಪಡೆದು ಈ ಜೋಡಿಯನ್ನು ಬೇರ್ಪಡಿಸಿದರು. ಶಫೀಕ್ ಔಟಾದ ಸ್ವಲ್ಪ ಹೊತ್ತಿನ ನಂತರ ಮಸೂದ್ ಕೂಡ ವಿಕೆಟ್ ಒಪ್ಪಿಸಿದರು.
ಸೌದ್ ಶಕೀಲ್ ಹಾಗೂ ಮಾಜಿ ನಾಯಕ ಬಾಬರ್ ಆಝಮ್ (30 ರನ್,71 ಎಸೆತ)4ನೇ ವಿಕೆಟ್‌ಗೆ 61 ರನ್ ಸೇರಿಸಿದರು. ಬಾಬರ್ ಅವರು ವೋಕ್ಸ್ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದು ಅರ್ಧಶತಕ ವಂಚಿತರಾದರು.
ಸೌದ್ ಶಕೀಲ್(ಔಟಾಗದೆ 35)ಹಾಗೂ ನಸೀಂ ಶಾ(0) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಮೊದಲ ಇನಿಂಗ್ಸ್: 86 ಓವರ್‌ಗಳಲ್ಲಿ 328/4
(ಶಾನ್ ಮಸೂದ್ 151, ಅಬ್ದುಲ್ಲಾ ಶಫೀಕ್ 102, ಅಟ್ಕಿನ್ಸನ್ 2-70)