ಚೆನ್ನೈ ಸೋತರೂ ಧೋನಿ ಬ್ಯಾಟಿಂಗ್ ನಿಂದ ಖುಷಿಪಟ್ಟ ಅಭಿಮಾನಿಗಳು, 10 ವರ್ಷಗಳ ಹಳೆಯ ಟ್ವೀಟ್ ವೈರಲ್
ವಿಶಾಖಪಟ್ಟಣ: ಚೆನ್ನೈ ಸೂಪರ್ ಕಿಂಗ್ಸ್ ದಿಗ್ಗಜ ಆಟಗಾರ ಎಂ.ಎಸ್. ಧೋನಿ 42ನೇ ವಯಸ್ಸಿನಲ್ಲಿ ತನ್ನ ಬ್ಯಾಟಿಂಗ್ ಸಾಮರ್ಥ್ಯದ ಮೂಲಕ ಅಭಿಮಾನಿಗಳನ್ನು ರಂಜಿಸುವುದನ್ನು ಮುಂದುವರಿಸಿದ್ದಾರೆ. ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಧೋನಿ ಇನಿಂಗ್ಸ್ ಅಂತ್ಯದಲ್ಲಿ 16 ಎಸೆತಗಳಲ್ಲಿ ಔಟಾಗದೆ 37 ರನ್ ಗಳಿಸಿದ್ದರು. ಆದರೆ ಅದಾಗಲೇ ಚೆನ್ನೈ ಸೋಲಿನ ಸುಳಿಗೆ ಸಿಲುಕಿತ್ತು. ಧೋನಿಯ ಪ್ರದರ್ಶನದಿಂದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಇದೇ ವೇಳೆ 10 ವರ್ಷಗಳ ಹಿಂದೆ ಹಿರಿಯ ವಿಕೆಟ್ ಕೀಪರ್-ಬ್ಯಾಟರ್ ಧೋನಿ ಮಾಡಿರುವ ಟ್ವೀಟ್ ಈಗ ಮತ್ತೆ ವೈರಲ್ ಆಗಿದೆ.
ಯಾವ ತಂಡ ಗೆಲ್ಲುತ್ತದೆ ಎನ್ನುವುದು ಮುಖ್ಯವಲ್ಲ, ನಾನಿಲ್ಲಿ ಮನರಂಜಿಸಲು ಇದ್ದೇನೆ ಎಂದು ಧೋನಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು.
ಡೆಲ್ಲಿ ವಿರುದ್ಧ ರವಿವಾರ ನಡೆದ ಪಂದ್ಯವು 10 ವರ್ಷಗಳ ಹಿಂದೆ ಧೋನಿ ಹೇಳಿದ ಮಾತನ್ನು ನಿಜವಾಗಿಸಿದೆ. ಸಿ ಎಸ್ ಕೆ ಈ ಪಂದ್ಯವನ್ನು ಸೋತಿದೆ. ಸಿ ಎಸ್ ಕೆ ಮಾಜಿ ನಾಯಕ ಧೋನಿ ಶುದ್ಧ ಮನರಂಜನೆಯನ್ನು ನೀಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.
ಗೆಲ್ಲಲು 192 ರನ್ ಗುರಿ ಬೆನ್ನಟ್ಟಿದ ಚೆನ್ನೈ ತಂಡದ ಪರ ಅಜಿಂಕ್ಯ ರಹಾನೆ(45 ರನ್), ಧೋನಿ(ಔಟಾಗದೆ 37) ಹಾಗೂ ಡ್ಯಾರಿಲ್ ಮಿಚೆಲ್(34 ರನ್)ಗೆಲುವಿಗಾಗಿ ಪ್ರಯತ್ನಿಸಿದರು. ಸಿ ಎಸ್ ಕೆ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.
ಸಿ ಎಸ್ ಕೆ ಗೆ ಗೆಲ್ಲಲು 18 ಎಸೆತಗಳಲ್ಲಿ 58 ರನ್ ಅಗತ್ಯವಿದ್ದಾಗ ಧೋನಿ ಈ ಋತುವಿನಲ್ಲಿ ಮೊದಲ ಬಾರಿ ಬ್ಯಾಟಿಂಗ್ ಗೆ ಇಳಿದರು. ಧೋನಿ ಮೈದಾನಕ್ಕೆ ಇಳಿದಾಗ ಅಭಿಮಾನಿಗಳು ಧೋನಿ… ಧೋನಿ ಎಂಬ ಘೋಷಣೆ ಮೊಳಗಿಸಿದರು. ಧೋನಿ ಆಕರ್ಷಕ ಹೊಡೆತದಿಂದ ಅಭಿಮಾನಿಗಳನ್ನು ರಂಜಿಸಿದರು.
ಆದರೆ ಮುಕೇಶ್ ಕುಮಾರ್ 19ನೇ ಓವರ್ನಲ್ಲಿ ಚೆನ್ನೈ ತಂಡಕ್ಕೆ ಕೇವಲ 5 ರನ್ ನೀಡಿ ಗೆಲುವಿನ ಕನಸು ಭಗ್ನಗೊಳಿಸಿದರು. ಚೆನ್ನೈಗೆ ಕೊನೆಯ ಓವರ್ನಲ್ಲಿ ಗೆಲ್ಲಲು 41 ರನ್ ಗಳಿಸಬೇಕಾಗಿತ್ತು.
ಕೊನೆಯ ಓವರ್ನ ಮೊದಲೆರಡು ಎಸೆತದಲ್ಲಿ ಧೋನಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದರು. ಇನ್ನೂ ಒಂದು ಬೌಂಡರಿ ಹಾಗೂ ಸಿಕ್ಸರ್ ಸಹಿತ ಒಟ್ಟು 20 ರನ್ ಗಳಿಸಿದರು. ಆದರೆ ಧೋನಿಯ ಈ ಅಬ್ಬರದ ಬ್ಯಾಟಿಂಗ್ ಚೆನ್ನೈಗೆ ಗೆಲುವು ತಂದುಕೊಡಲಿಲ್ಲ.