ಮೊದಲ ಟೆಸ್ಟ್: ಡೇವಿಡ್ ವಾರ್ನರ್ ಶತಕ, ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯ 346/5
ಪರ್ತ್: ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಭರ್ಜರಿ ಶತಕದ(164 ರನ್, 211 ಎಸೆತ)ಸಹಾಯದಿಂದ ಆತಿಥೇಯ ಆಸ್ಟ್ರೇಲಿಯ ತಂಡ ಮೊದಲ ಟೆಸ್ಟ್ ನ ಮೊದಲ ದಿನವಾದ ಗುರುವಾರ ಪಾಕಿಸ್ತಾನದ ವಿರುದ್ಧ 84 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 346 ರನ್ ಗಳಿಸಿದೆ.
ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಂತರ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಲು ಸಜ್ಜಾಗಿರುವ 37ರ ಹರೆಯದ ವಾರ್ನರ್ ಆರಂಭಿಕ ಜೋಡಿ ಉಸ್ಮಾನ್ ಖ್ವಾಜಾ(41 ರನ್)ಅವರೊಂದಿಗೆ ಮೊದಲ ವಿಕೆಟ್ ಗೆ 126 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ನಾಯಕ ಪ್ಯಾಟ್ ಕಮಿನ್ಸ್ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಇನಿಂಗ್ಸ್ ನ 43ನೇ ಓವರ್ ನಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ವಾರ್ನರ್ 125 ಎಸೆತಗಳಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 26ನೇ ಶತಕವನ್ನು ಪೂರೈಸಿದರು. ವಾರ್ನರ್ ಶತಕದ ಬಲದಿಂದ ಆಸ್ಟ್ರೇಲಿಯವು ಪ್ರಥಮ ಟೆಸ್ಟ್ ನ ಮೊದಲ ದಿನ ಉತ್ತಮ ಆರಂಭ ಪಡೆದಿದೆ.
ಇಲ್ಲಿಗೆ ಬಂದು ರನ್ ಗಳಿಸಿ ಪಾಕಿಸ್ತಾನದ ಬೌಲರ್ ಗಳಿಗೆ ಒತ್ತಡ ಹಾಕುವುದು ನನ್ನ ಕೆಲಸ. ಟೀಕೆಗಳು ಕೇಳಿಬರುತ್ತವೆ. ಅದನ್ನು ನಾವು ಸ್ವೀಕರಿಸಬೇಕು. ಸ್ಕೋರ್ ಬೋರ್ಡ್ ನಲ್ಲಿ ರನ್ ಗಳಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುವುದಕ್ಕಿಂತ ಬೇರೆ ಉತ್ತಮ ದಾರಿಯಿಲ್ಲ ಎಂದು 2020ರಿಂದ ಟೆಸ್ಟ್ ಕ್ರಿಕೆಟ್ ನಲ್ಲಿ ಕೇವಲ 32ರ ಸರಾಸರಿಯಲ್ಲಿ ಆಡುತ್ತಿರುವ ವಾರ್ನರ್ ಫೋಕ್ಸ್ ಕ್ರಿಕೆಟ್ ಗೆ ತಿಳಿಸಿದರು.
ವಿಶ್ವ ಟೆಸ್ಟ್ ಚಾಂಪಿಯನ್ ಆಸ್ಟ್ರೇಲಿಯವು ಸ್ಫೋಟಕ ಆರಂಭ ಪಡೆದಿದ್ದು, ವೇಗದ ಬೌಲರ್ ಶಾಹೀನ್ ಅಫ್ರಿದಿ ಮೊದಲ ಓವರ್ ನಲ್ಲಿ 14 ರನ್ ನೀಡಿದ್ದರು. ಭೋಜನ ವಿರಾಮದ ನಂತರ ಖ್ವಾಜಾ ಅವರು ಅಫ್ರಿದಿ(1-75) ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಸರ್ಫರಾಝ್ ಅಹ್ಮದ್ ಗೆ ಕ್ಯಾಚ್ ನೀಡಿದರು. ಖ್ವಾಜಾ ಔಟಾದ ಸ್ವಲ್ಪ ಹೊತ್ತಿನಲ್ಲಿ ಮಾರ್ನಸ್ ಲಾಬುಶೇನ್(16 ರನ್)ಮಧ್ಯಮ ವೇಗಿ ಫಹೀಮ್ ಅಶ್ರಫ್(1-65)ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು.
ಸ್ಪಿನ್ನರ್ ಅಘಾ ಸಲ್ಮಾನ್ ರಿಂದ ಜೀವದಾನದ ಲಾಭ ಪಡೆದ ವಾರ್ನರ್ 75ನೇ ಓವರ್ ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ವೇಗಿ ಆಮಿರ್ ಜಮಾಲ್ ಗೆ(2-63) ವಿಕೆಟ್ ಒಪ್ಪಿಸುವ ಮೊದಲು 211 ಎಸೆತಗಳಲ್ಲಿ 16 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನು ಒಳಗೊಂಡ 164 ರನ್ ಸಿಡಿಸಿದರು.
ಟೆಸ್ಟ್ ಪಂದ್ಯದಲ್ಲಿ 8,651 ರನ್ ಗಳಿಸಿದ ವಾರ್ನರ್ ಆಸ್ಟ್ರೇಲಿಯ ಪರ ಗರಿಷ್ಠ ರನ್ ಗಳಿಸಿದ 5ನೇ ಬ್ಯಾಟರ್ ಎನಿಸಿಕೊಂಡರು. ಮ್ಯಾಥ್ಯೂ ಹೇಡನ್(8,625) ಹಾಗೂ ಮೈಕಲ್ ಕ್ಲಾರ್ಕ್(8,643)ದಾಖಲೆಯನ್ನು ಮುರಿದರು.
ಭೋಜನ ವಿರಾಮದ ನಂತರ ಶಿಸ್ತುಬದ್ಧ ಬೌಲಿಂಗ್ ಮಾಡಿದ್ದ ಪಾಕಿಸ್ತಾನವು 2ನೇ ದಿನದಾಟದಲ್ಲಿ ಆಸೀಸ್ ಸ್ಕೋರನ್ನು 400ರೊಳಗೆ ನಿಯಂತ್ರಿಸುವ ವಿಶ್ವಾಸದಲ್ಲಿದೆ. ಮೈಕಲ್ ಮಾರ್ಷ್(15 ರನ್) ಹಾಗೂ ಅಲೆಕ್ಸ್ ಕಾರೆ(ಔಟಾಗದೆ 14)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್: 84 ಓವರ್ ಗಳಲ್ಲಿ 346/5
(ಡೇವಿಡ್ ವಾರ್ನರ್ 164, ಉಸ್ಮಾನ್ ಖ್ವಾಜಾ 41, ಟ್ರಾವಿಸ್ ಹೆಡ್ 40, ಸ್ಟೀವನ್ ಸ್ಮಿತ್ 31, ಆಮಿರ್ ಜಮಾಲ್ 2-63)