ಇತಿಹಾಸ ನಿರ್ಮಿಸಿದ ವಾಶಿಂಗ್ಟನ್ ಸುಂದರ್

Update: 2024-10-25 15:56 GMT

ವಾಶಿಂಗ್ಟನ್ ಸುಂದರ್ | PTI 

ಪುಣೆ : ನ್ಯೂಝಿಲ್ಯಾಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ತನ್ನ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿ 10 ವಿಕೆಟ್ ಗೊಂಚಲು ಕಬಳಿಸಿದ ವಾಶಿಂಗ್ಟನ್ ಸುಂದರ್ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.

ಬ್ಯಾಟರ್‌ಗಳು ಭಾರೀ ವೈಫಲ್ಯ ಕಂಡರೂ ಮೂರೂವರೆ ವರ್ಷಗಳ ನಂತರ ಟೆಸ್ಟ್ ಕ್ರಿಕೆಟಿಗೆ ವಾಪಸಾಗಿರುವ ಸುಂದರ್ ಸ್ಮರಣೀಯ ಪ್ರದರ್ಶನ ನೀಡುತ್ತಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವುದರಿಂದ ವಂಚಿತರಾಗಿದ್ದ ಸುಂದರ್ 2ನೇ ಟೆಸ್ಟ್ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದು ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗಳನ್ನು ಉರುಳಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದ ಬಲಗೈ ಸ್ಪಿನ್ನರ್ ಸುಂದರ್ ನ್ಯೂಝಿಲ್ಯಾಂಡ್ ಬ್ಯಾಟಿಂಗ್ ಸರದಿಯನ್ನು ಭೇದಿಸಿದ್ದರು.

ಎರಡನೇ ಇನಿಂಗ್ಸ್‌ನಲ್ಲೂ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ ಸುಂದರ್ ಇನ್ನೂ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದು, ನ್ಯೂಝಿಲ್ಯಾಂಡ್‌ನ ಅಗ್ರ ಸರದಿಯ ದಾಂಡಿಗರಿಗೆ ಸವಾಲಾದರು. ಡೆವೊನ್ ಕಾನ್ವೆ(17ರನ್), ರಚಿನ್ ರವೀಂದ್ರ(9), ಡೇರಿಲ್ ಮಿಚೆಲ್(18 ರನ್) ಹಾಗೂ ಟಾಮ್ ಲ್ಯಾಥಮ್ ವಿಕೆಟ್‌ಗಳನ್ನು ಪಡೆದಿದ್ದಾರೆ.

ಸುಂದರ್ ಭಾರತದ ಪರ 9 ಇನಿಂಗ್ಸ್‌ಗಳಲ್ಲಿ ಆಡಿದ್ದು, ಒಟ್ಟು 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 11 ವಿಕೆಟ್‌ಗಳನ್ನು ಪುಣೆ ಟೆಸ್ಟ್ ಪಂದ್ಯವೊಂದರಲ್ಲಿ ಕಬಳಿಸಿದ್ದಾರೆ. ಸುಂದರ್ ಈ ಹಿಂದೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ತಂಡಗಳ ವಿರುದ್ಧ ಆಡಿದ್ದರು.

ಇಂಗ್ಲೆಂಡ್ ವಿರುದ್ಧದ 5 ಇನಿಂಗ್ಸ್‌ಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆದಿದ್ದ ಸುಂದರ್, ಆಸ್ಟ್ರೇಲಿಯದ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 4 ವಿಕೆಟ್‌ಗಳನ್ನು ಕಬಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News