ಪ್ರಥಮ ಟೆಸ್ಟ್: ಇಂಗ್ಲೆಂಡ್ 246 ರನ್ ಗೆ ಆಲೌಟ್

Update: 2024-01-25 17:01 GMT

ಹೈದರಾಬಾದ್: ಸ್ಪಿನ್ನರ್ ಗಳು ಹಾಗೂ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಮೋಘ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಪ್ರಥಮ ಟೆಸ್ಟ್ನ ಮೊದಲ ದಿನದಾಟದಲ್ಲಿ ಆತಿಥೇಯ ಭಾರತ ಮೆರೆದಾಡಿದೆ.

ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 246 ರನ್ಗೆ ನಿಯಂತ್ರಿಸಿತು. ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ಯಶಸ್ವಿ ಜೈಸ್ವಾಲ್ ಆಕ್ರಮಣಕಾರಿ ಅರ್ಧಶತಕದ(ಔಟಾಗದೆ 76, 70 ಎಸೆತ, 9 ಬೌಂಡರಿ, 3 ಸಿಕ್ಸರ್)ಸಹಾಯದಿಂದ ಮೊದಲ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ. ಇಂಗ್ಲೆಂಡ್ ಇನಿಂಗ್ಸ್ ಗಿಂತ 127 ರನ್ ಹಿನ್ನಡೆಯಲ್ಲಿದೆ.

ಭಾರತ ಬ್ಯಾಟಿಂಗ್ಗೆ ಇಳಿದಾಗ ಪಿಚ್ ಆರಂಭಿಕ ಆಟಗಾರರಿಗೆ ಹೆಚ್ಚು ಸವಾಲಾಗಲಿಲ್ಲ. ಇದರ ಲಾಭ ಪಡೆದ ಜೈಸ್ವಾಲ್ ಆಕರ್ಷಕ ಇನಿಂಗ್ಸ್ ಆಡಿದರು. ಎಡಗೈ ಸ್ಪಿನ್ನರ್ ಟಾಮ್ ಹಾರ್ಟ್ಲಿ ಎಸೆದ ಮೊದಲ ಓವರ್ನಲ್ಲಿ ಎರಡು ಸಿಕ್ಸರ್ ಸಿಡಿಸಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು.

ನಾಯಕ ರೋಹಿತ್ ಶರ್ಮಾ(24 ರನ್) ಜೈಸ್ವಾಲ್ ಅವರೊಂದಿಗೆ ಕೇವಲ 12.1 ಓವರ್ ಗಳಲ್ಲಿ ಮೊದಲ ವಿಕೆಟ್ಗೆ 80 ರನ್ ಜೊತೆಯಾಟ ನಡೆಸಿದ ನಂತರ ಲೀಚ್ಗೆ ವಿಕೆಟ್ ಒಪ್ಪಿಸಿದರು. ಶುಭಮನ್ ಗಿಲ್(ಔಟಾಗದೆ 14) ಜೈಸ್ವಾಲ್ಗೆ ಸಾಥ್ ನೀಡುತ್ತಿದ್ದಾರೆ.

ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ಎದುರು ಇಂಗ್ಲೆಂಡ್ ಸ್ಪಿನ್ನರ್ ಗಳು ಪರದಾಟ ನಡೆಸಿದರು. ಆದರೆ ಭಾರತದ ಸ್ಪಿನ್ನರ್ ಗಳು ಇಂಗ್ಲೆಂಡ್ ಬ್ಯಾಟರ್ ಗಳಿಗೆ ತೀವ್ರ ಸವಾಲು ಒಡ್ಡಿದರು.

*ಇಂಗ್ಲೆಂಡ್ 246 ರನ್ ಗೆ ಆಲೌಟ್

ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಭಾರತದ ತ್ರಿವಳಿ ಸ್ಪಿನ್ನರ್ ಗಳಾದ ಆರ್.ಅಶ್ವಿನ್(3-68), ರವೀಂದ್ರ ಜಡೇಜ(3-88) ಹಾಗೂ ಅಕ್ಷರ್ ಪಟೇಲ್(2-33) ಸ್ಪಿನ್ ಮೋಡಿಗೆ ತತ್ತರಿಸಿ 64.3 ಓವರ್ ಗಳಲ್ಲಿ 246 ರನ್ ಗಳಿಸಿ ಆಲೌಟಾಯಿತು.

ನಾಯಕ ಬೆನ್ ಸ್ಟೋಕ್ಸ್ (70 ರನ್,88 ಎಸೆತ, 6 ಬೌಂಡರಿ, 3 ಸಿಕ್ಸರ್)ಒಂದಷ್ಟು ಪ್ರತಿರೋಧ ವ್ಯಕ್ತಪಡಿಸಿ ಇನಿಂಗ್ಸ್ ಆಧರಿಸಿದರು. ಆದರೆ ಉಳಿದ ಆಟಗಾರರು ಭಾರತದ ಪಿಚ್ನಲ್ಲಿ ಗಟ್ಟಿಯಾಗಿ ನಿಂತು ಆಡುವಲ್ಲಿ ವಿಫಲರಾದರು.

ಮಾಜಿ ನಾಯಕ ಜೋ ರೂಟ್(29 ರನ್)ಹಾಗೂ ಜಾನಿ ಬೈರ್ಸ್ಟೋವ್(37 ರನ್)ಸ್ವಲ್ಪಮಟ್ಟಿಗೆ ಪ್ರತಿ ಹೋರಾಟ ನೀಡಿದರು. ಭೋಜನ ವಿರಾಮದ ನಂತರ ವಿಕೆಟ್ ಗಳು ಪತನಗೊಂಡ ಕಾರಣ ಇಂಗ್ಲೆಂಡ್ ಕುಸಿತ ಕಂಡಿತು.

ಬೆನ್ ಸ್ಟೋಕ್ಸ್ ಏಕಾಂಗಿ ಹೋರಾಟ ನೀಡಿದರು. ಸ್ಟೋಕ್ಸ್ ಪ್ರಯತ್ನದಿಂದಾಗಿ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್ನಲ್ಲಿ ಗೌರವಾರ್ಹ ಮೊತ್ತ ಗಳಿಸಿತು. ಸ್ಟೋಕ್ಸ್ 70 ರನ್ ಗಳಿಸಿದ ಹೊರತಾಗಿಯೂ ಭಾರತವು ಇನಿಂಗ್ಸ್ನಲ್ಲಿ ಹಿಡಿತ ಸಾಧಿಸಿತು. ಆಂಗ್ಲರು ಒಂದೇ ಅವಧಿಯಲ್ಲಿ 107 ರನ್ ಸೇರಿಸುವಷ್ಟರಲ್ಲಿ 5 ವಿಕೆಟ್ ಗಳನ್ನು ಕಳೆದುಕೊಂಡಿತು.

ಇಂಗ್ಲೆಂಡ್ ಪರ ಅಗ್ರ ಸ್ಕೋರರ್ ಎನಿಸಿಕೊಂಡ ಸ್ಟೋಕ್ಸ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಇಂಗ್ಲೆಂಡ್ ಮೊದಲ ಇನಿಂಗ್ಸ್ಗೆ ತೆರೆ ಬಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News