ಟೋಕಿಯೊ ಗೇಮ್ಸ್ ನ ಚಿನ್ನದ ಪದಕ ದಾಖಲೆಯನ್ನು ಮುರಿದ ಭಾರತ
ಪ್ಯಾರಿಸ್ : ಪ್ರವೀಣ್ ಕುಮಾರ್ ಪ್ರಸಕ್ತ ಪ್ಯಾರಾಲಿಂಪಿಕ್ಸ್ ನಲ್ಲಿ ಶುಕ್ರವಾರ ಪುರುಷರ ಹೈಜಂಪ್ ಟಿ64 ಸ್ಫರ್ಧೆಯಲ್ಲಿ ಚಿನ್ನದ ಪದಕ ಬಾಚಿಕೊಳ್ಳುವ ಮೂಲಕ ಭಾರತವು ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ನಿರ್ಮಿಸಿದ್ದ ಗರಿಷ್ಠ ಚಿನ್ನದ ಪದಕದ ದಾಖಲೆಯನ್ನು ಮುರಿದಿದೆ.
2.08 ಮೀ.ಎತ್ತರಕ್ಕೆ ಜಿಗಿದ ಪ್ರವೀಣ್ ಭಾರತಕ್ಕೆ ಆರನೇ ಚಿನ್ನದ ಪದಕ ಗೆದ್ದುಕೊಟ್ಟರು.
ಪುರುಷರ ಕ್ಲಬ್ ಥ್ರೋನಲ್ಲಿ ಧರ್ಮವೀರ್ ಅವರು ಏಶ್ಯನ್ ದಾಖಲೆ(34.92ಮೀ.)ಯೊಂದಿಗೆ ದೇಶದ ಪರ 5ನೇ ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ಟೋಕಿಯೊದಲ್ಲಿ ಭಾರತ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದರು.
ಭಾರತವು ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಐದು ಚಿನ್ನ, ಆರು ಬೆಳ್ಳಿ ಹಾಗೂ 8 ಕಂಚಿನ ಪದಕ ಜಯಿಸಿತ್ತು.
ಪ್ಯಾರಿಸ್ನಲ್ಲೀಗ ಆರು ಚಿನ್ನ ಸಹಿತ ಒಟ್ಟು 26 ಪದಕಗಳನ್ನು ಗೆದ್ದಿರುವ ಭಾರತವು ಒಂದೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದೆ.
ಅವನಿ ಲೇಖರ(ಶೂಟಿಂಗ್)ಪ್ಯಾರಿಸ್ನಲ್ಲಿ ಭಾರತಕ್ಕೆ ಮೊತ್ತ ಮೊದಲ ಚಿನ್ನ ಗೆದ್ದುಕೊಟ್ಟಿದ್ದರು. ನಿತೇಶ್ ಕುಮಾರ್(ಪ್ಯಾರಾ ಬ್ಯಾಡ್ಮಿಂಟನ್), ಸುಮಿತ್ ಅಂತಿಲ್(ಜಾವೆಲಿನ್ ಎಸೆತ), ಹರ್ವಿಂದರ್ ಸಿಂಗ್(ಪ್ಯಾರಾ ಆರ್ಚರಿ) ಚಿನ್ನದ ಪದಕ ಜಯಿಸಿದ್ದರು.