ಗುರುವಾರ ದಿಂದ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭ: ಭಾರತಕ್ಕೆ ಇಂಗ್ಲೆಂಡ್ ಎದುರಾಳಿ

Update: 2024-01-24 16:29 GMT

ಸಾಂದರ್ಭಿಕ ಚಿತ್ರ | Photo : NDTV 

ಹೈದರಾಬಾದ್: ಕಳೆದ 12 ವರ್ಷಗಳಿಂದ ಸ್ವದೇಶಿ ಮಣ್ಣಿನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದಿರುವ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಗುರುವಾರ ಆರಂಭವಾಗಲಿರುವ ಬಹುನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣೀಯಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

2012ರಲ್ಲಿ ಅಲಸ್ಟೈರ್ ಕುಕ್ ನೇತೃತ್ವದ ಇಂಗ್ಲೆಂಡ್ ವಿರುದ್ಧ ಸ್ವದೇಶದಲ್ಲಿ 1-2 ಅಂತರದಿಂದ ಸೋತ ನಂತರ ಭಾರತದ ಅಜೇಯ ಗೆಲುವಿನ ದಾಖಲೆಯು ಅಸಾಮಾನ್ಯವಾಗಿದೆ. ಏಳು ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಹಿತ ಸತತ 16 ಸರಣಿಗಳನ್ನು ಜಯಿಸಿದೆ. ಈ ಅವಧಿಯಲ್ಲಿ ಭಾರತವು ತವರು ನೆಲದಲ್ಲಿ ಆಡಿರುವ 44 ಟೆಸ್ಟ್ ಪಂದ್ಯಗಳ ಪೈಕಿ ಕೇವಲ ಮೂರು ಪಂದ್ಯಗಳನ್ನು ಸೋತಿದೆ.

ನೆಚ್ಚಿನ ಪಿಚ್ಗಳು, ಪಿಚ್ನ ಲಾಭ ಪಡೆಯುವಲ್ಲಿ ಬೌಲರ್ ಗಳ ಯಶಸ್ಸು ಸಹಿತ ಹಲವು ಅಂಶಗಳು ಭಾರತದ ಸತತ ಟೆಸ್ಟ್ ಪಂದ್ಯದ ಗೆಲುವಿಗೆ ಕಾರಣವಾಗಿದೆ. ಭಾರತದ ಈ ಯಶಸ್ಸಿಗೆ ಸ್ಪಿನ್ನರ್ ಗಳಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರ ಕೊಡುಗೆ ಅಪಾರವಿದೆ. ತಮ್ಮ ಸ್ಪಿನ್ ಮೋಡಿಯ ಮೂಲಕ ಪ್ರವಾಸಿ ತಂಡಗಳನ್ನು ಬಗ್ಗುಬಡಿದಿದ್ದಾರೆ. ಅಶ್ವಿನ್ 2012ರ ನಂತರ 46 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 283 ವಿಕೆಟ್ ಗಳನ್ನು ಪಡೆದಿದ್ದಾರೆ. ಸೌರಾಷ್ಟ್ರದ ಜಡೇಜ ಹಿಂದಿನ 12 ವರ್ಷಗಳಲ್ಲಿ 39 ಟೆಸ್ಟ್ ಪಂದ್ಯಗಳಲ್ಲಿ 191 ವಿಕೆಟ್ ಗಳನ್ನು ಪಡೆದಿದ್ದಾರೆ. ಒಟ್ಟಾಗಿ ಈ ಇಬ್ಬರು 21ರ ಸರಾಸರಿಯಲ್ಲಿ 500 ವಿಕೆಟ್ ಬಾಚಿಕೊಂಡಿದ್ದಾರೆ.

ಆರ್ಜಿಐ ಸ್ಟೇಡಿಯಂ ನಲ್ಲಿ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಈ ಮೈದಾನದ ಪಿಚ್ ಪಂದ್ಯ ಮುಂದುವರಿದಂತೆ ಟರ್ನ್ ಆಗುವ ನಿರೀಕ್ಷೆ ಇದೆ. ಆಫ್ ಸ್ಪಿನ್ನರ್ ಅಶ್ವಿನ್ ಹಾಗೂ ಎಡಗೈ ಸ್ಪಿನ್ನರ್ ಜಡೇಜ ಮತ್ತೊಮ್ಮೆ ಮಿಂಚಲು ಸಜ್ಜಾಗಿದ್ದಾರೆ.

ಭಾರತವು ಮೂರನೇ ಸ್ಪಿನ್ನರ್ರನ್ನು ಆಡಿಸುವ ಸಾಧ್ಯತೆಯಿದೆ. ಅಕ್ಷರ್ ಪಟೇಲ್ ಅಥವಾ ಕುಲದೀಪ್ ಯಾದವ್ ಗೆ ಆಡುವ ಉತ್ತಮ ಅವಕಾಶವಿದೆ.

ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯು ಇಂಗ್ಲೆಂಡಿನ ಅವಕಾಶವನ್ನು ಹೆಚ್ಚಿಸಿದೆ. ಭಾರತೀಯ ಟೆಸ್ಟ್ ಕ್ರಿಕೆಟ್ ನ ಪ್ರಮುಖ ಸದಸ್ಯನಾಗಿರುವ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಆಡಿರುವ 28 ಪಂದ್ಯಗಳಲ್ಲಿ ಐದು ಶತಕಗಳ ಸಹಿತ ಒಟ್ಟು 1,991 ರನ್ ಗಳಿಸಿದ್ದಾರೆ.

ಸವಾಲಿನ ಹೊರತಾಗಿಯೂ ಭಾರತವು ಪ್ರಬಲ ಎದುರಾಳಿಯಾಗಿ ಉಳಿದುಕೊಂಡಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ 4 ಹಾಗೂ 5ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ ಬ್ಯಾಟಿಂಗ್ ಗೆ ಶಕ್ತಿ ತುಂಬಲಿದ್ದಾರೆ. ಕೆ.ಎಸ್. ಭರತ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಮಧ್ಯಮ ಸರದಿಯ ಬ್ಯಾಟರ್ ರಜತ್ ಪಾಟಿದಾರ್ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಕೊಹ್ಲಿ ಬದಲಿ ಆಟಗಾರನಾಗಿ ತಂಡವನ್ನು ಸೇರಲಿದ್ದಾರೆ.

ಬೆನ್ ಸ್ಟೋಕ್ಸ್ ನಾಯಕತ್ವ ಹಾಗೂ ಬ್ರೆಂಡನ್ ಮೆಕಲಮ್ ಕೋಚಿಂಗ್ ಅಡಿಯಲ್ಲಿ ಇಂಗ್ಲೆಂಡ್ ಆಕ್ರಮಣಕಾರಿ ಹಾಗೂ ನಿರ್ಭೀತ ಕ್ರಿಕೆಟ್ ಆಡುತ್ತಿದ್ದು, ಈ ಅಂಶವು 2022ರಲ್ಲಿ ಪಾಕಿಸ್ತಾನ ವಿರುದ್ಧ 3-0 ಅಂತರದಿಂದ ಟೆಸ್ಟ್ ಸರಣಿ ಗೆಲ್ಲಲು ನೆರವಾಗಿದೆ.

ಯುವ ಆಫ್ ಸ್ಪಿನ್ನರ್ ಶುಐಬ್ ಬಶೀರ್ ವೀಸಾ ವಿಚಾರದಲ್ಲಿ ಭಾರತಕ್ಕೆ ಆಗಮಿಸುವುದು ವಿಳಂಬವಾಗಿದೆ. 20ರ ಹರೆಯದ ಬಶೀರ್ ಅನುಪಸ್ಥಿತಿಯು ತಂಡಕ್ಕೆ ನಷ್ಟವಾಗಿದೆ ಎಂದು ನಾಯಕ ಬೆನ್ ಸ್ಟೋಕ್ಸ್ ಹೇಳಿದ್ದಾರೆ.

ತಂಡಗಳು

ಭಾರತ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಕೆ.ಎಸ್. ಭರತ್(ವಿಕೆಟ್ ಕೀಪರ್), ಧ್ರುವ್ ಜುರೆಲ್(ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ(ಉಪ ನಾಯಕ), ಅವೇಶ್ ಖಾನ್.

ಇಂಗ್ಲೆಂಡ್: ಬೆನ್ ಸ್ಟೋಕ್ಸ್(ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಆ್ಯಂಡರ್ಸನ್, ಗಸ್ ಅಟ್ಕಿನ್ಸನ್, ಜಾನಿ ಬೈರ್ಸ್ಟೋವ್, ಡಾನ್ ಲಾರೆನ್ಸ್, ಝಾಕ್ ಕ್ರಾವ್ಲೆ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜಾಕ್ ಲೀಚ್, ಒಲಿ ಪೋಪ್, ಒಲಿ ರಾಬಿನ್ಸನ್, ಜೋ ರೂಟ್, ಮಾರ್ಕ್ ವುಡ್.

ಪಂದ್ಯ ಆರಂಭದ ಸಮಯ: ಬೆಳಗ್ಗೆ 9:30.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News