ಫುಟ್ಬಾಲಿಗ ಅನ್ವರ್ ಅಲಿ ಅಮಾನತು ಹಿಂದಕ್ಕೆ : ದಿಲ್ಲಿ ಹೈಕೋರ್ಟ್‌ಗೆ ಎಐಎಫ್‌ಎಫ್ ಮಾಹಿತಿ

Update: 2024-09-13 16:17 GMT

ಅನ್ವರ್ ಅಲಿ | PC : NDTV 

ಹೊಸದಿಲ್ಲಿ : ಭಾರತೀಯ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ ಅನ್ವರ್ ಅಲಿ ಅವರನ್ನು ಅಮಾನತುಗೊಳಿಸಿ ಹೊರಡಿಸಲಾಗಿರುವ ಆದೇಶವನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್)ನ ಆಟಗಾರರ ಸ್ಥಾನಮಾನ ಸಮಿತಿಯು ಹಿಂದಕ್ಕೆ ಪಡೆಯುವುದು ಎಂದು ದಿಲ್ಲಿ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಲಾಯಿತು.

ಈ ವಿಷಯವನ್ನು ಸಮಿತಿಯು ಶನಿವಾರ ಹೊಸದಾಗಿ ಪರಿಗಣಿಸುವುದು ಮತ್ತು ಎಲ್ಲಾ ಸಂಬಂಧಪಟ್ಟ ಪಕ್ಷಗಳ ಅಹವಾಲುಗಳನ್ನು ಆಲಿಸಿದ ಬಳಿಕ ವಿವರವಾದ ಆದೇಶವನ್ನು ಹೊರಡಿಸಲಾಗುವುದು ಎಂದು ಎಐಎಫ್‌ಎಫ್ ಪರವಾಗಿ ಹಾಜರಾದ ವಕೀಲರು ನ್ಯಾಯಮೂರ್ತಿ ಸಂಜೀವ್ ನರುಲ ಅವರ ಸಮ್ಮುಖದಲ್ಲಿ ಹೇಳಿದರು.

ಆಟಗಾರರ ಸ್ಥಾನಮಾನ ಸಮಿತಿಯ ನಿರ್ಧಾರವನ್ನು ಪ್ರಶ್ನಿಸಿ ಅಲಿ, ಅವರ ಹಾಲಿ ತಂಡ ಈಸ್ಟ್ ಬೆಂಗಾಲ್ ಮತ್ತು ಮಾತೃ ಕ್ಲಬ್ ದಿಲ್ಲಿ ಎಫ್‌ಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು.

ಅನ್ವರ್ ಅಲಿ ‘‘ತಪ್ಪಿತಸ್ಥ’’ ಎಂಬುದಾಗಿ ಪರಿಗಣಿಸಿದ ಬಳಿಕ, ಅವರನ್ನು ಸೆಪ್ಟಂಬರ್ 10ರಂದು ಎಐಎಫ್‌ಎಫ್ ನಾಲ್ಕು ತಿಂಗಳ ಕಾಲ ಅಮಾನತುಗೊಳಿಸಿತ್ತು. ಜೊತೆಗೆ, ಆಟಗಾರ ಮತ್ತು ಅವರಿಗೆ ಸಂಬಂಧಿಸಿದ ಎರಡು ಕ್ಲಬ್‌ಗಳು ಮೋಹನ್ ಬಾಗನ್‌ಗೆ 12.90 ಕೋಟಿ ರೂ. ಮೊತ್ತದ ಬೃಹತ್ ಪರಿಹಾರವನ್ನು ನೀಡುವಂತೆ ಸೂಚಿಸಿತ್ತು.

ಅನ್ವರ್ ಅಲಿ ದಿಲ್ಲಿ ಎಫ್‌ಸಿ ಮತ್ತು ಈಸ್ಟ್ ಬೆಂಗಾಲ್ ತಂಡಗಳ ಜೊತೆಗೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾಗಿ, ಈ ಎರಡು ಕ್ಲಬ್‌ಗಳು ಎರಡು ವರ್ಗಾವಣೆ ಅವಧಿಗಳಲ್ಲಿ - 2024-25ರ ಚಳಿಗಾಗಲ ಮತ್ತು 2025-26ರ ಬೇಸಿಗೆ ಕಾಲ- ಆಟಗಾರರನ್ನು ಸೇರಿಸಿಕೊಳ್ಳುವುದನ್ನೂ ಎಐಎಫ್‌ಎಫ್ ನಿಷೇಧಿಸಿದೆ.

ಎಐಎಫ್‌ಎಫ್ ನೊಂದ ಪಕ್ಷಗಳಿಗೆ ಸೂಕ್ತ ಕಾರಣಗಳನ್ನು ಯಾಕೆ ನೀಡಿಲ್ಲ ಎಂದು ವಿಚಾರಣೆಯ ವೇಳೆ ನ್ಯಾಯಾಲಯವು ಪ್ರಶ್ನಿಸಿತು. ಈ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳುವಂತೆ ಎಐಎಫ್‌ಎಫ್ ವಕೀಲರಿಗೆ ನ್ಯಾಯಾಲಯ ಸೂಚಿಸಿತು.

ಬಳಿಕ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ವಕೀಲರು, ‘‘ಸೆಪ್ಟಂಬರ್ 10ರ ತನ್ನ ಆದೇಶವನ್ನು ಎಐಎಫ್‌ಎಪ್ ಆಟಗಾರರ ಸ್ಥಾನಮಾನ ಸಮಿತಿಯು ಹಿಂದಕ್ಕೆ ಪಡೆದುಕೊಳ್ಳುತ್ತದೆ ಎಂಬುದಾಗಿ ಘೋಷಿಸಿಲು ನನಗೆ ತಿಳಿಸಲಾಗಿದೆ. ಸಮಿತಿಯು ನಾಳೆ ಹೊಸದಾಗಿ ಸಂಬಂಧಪಟ್ಟ ಪಕ್ಷಗಳ ಅಹವಾಲುಗಳನ್ನು ಆಲಿಸಲಿದೆ’’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News