ಶನಿವಾರ ನಾಲ್ಕನೇ ಟ್ವೆಂಟಿ-20: ವಿಂಡೀಸ್ ವಿರುದ್ಧ ಸರಣಿ ಸಮಬಲಗೊಳಿಸುವತ್ತ ಭಾರತದ ಚಿತ್ತ

Update: 2023-08-11 16:11 GMT

Phpto : twitter/ICC

ಫ್ಲೋರಿಡ: ನಾಲ್ಕನೇ ಟ್ವೆಂಟಿ-20 ಪಂದ್ಯದಲ್ಲಿ ಮತ್ತೊಂದು ಭರ್ಜರಿ ಪ್ರದರ್ಶನದ ವಿಶ್ವಾಸದಲ್ಲಿರುವ ಭಾರತವು ವೆಸ್ಟ್ಇಂಡೀಸ್ ವಿರುದ್ಧ ಜಯ ಸಾಧಿಸಿ 5 ಪಂದ್ಯಗಳ ಸರಣಿಯನ್ನು 2-2ರಿಂದ ಸಮಬಲಗೊಳಿಸುವತ್ತ ಚಿತ್ತಹರಿಸಿದೆ.

ಭಾರತವು ಮೂರನೇ ಟಿ-20 ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಸ್ಪರ್ಧೆಯಲ್ಲಿದ್ದರೂ ಕೂಡ ಆತಿಥೇಯ ವಿಂಡೀಸ್ ಸದ್ಯ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ.

ಟ್ವೆಂಟಿ-20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ 3ನೇ ಪಂದ್ಯದಲ್ಲಿ ತನ್ನ ಮೊದಲಿನ ಲಯಕ್ಕೆ ಮರಳಿದ ಸೂಚನೆ ನೀಡಿದ್ದರು. ಯುವ ಬ್ಯಾಟರ್ ತಿಲಕ್ ವರ್ಮಾ ನಿರ್ಣಾಯಕ ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. 4ನೇ ಕ್ರಮಾಂಕದಲ್ಲಿ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಆದಾಗ್ಯೂ ಭಾರತದ ಆರಂಭಿಕ ಜೋಡಿ ರನ್ ಗಳಿಸಲು ಪರದಾಟವನ್ನು ಮುಂದುವರಿಸಿದೆ.

3ನೇ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ಗೆ ವಿಶ್ರಾಂತಿ ನೀಡಿ ಯಶಸ್ವಿ ಜೈಸ್ವಾಲ್ಗೆ ಮೊದಲ ಬಾರಿ ಟಿ-20ಪಂದ್ಯವನ್ನಾಡುವ ಅವಕಾಶ ನೀಡಲಾಯಿತು. ಭಾರತದ ಆರಂಭಿಕ ಜೋಡಿ ಸತತ ಮೂರನೇ ಪಂದ್ಯದಲ್ಲಿ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲವಾಗಿದೆ. ಜೈಸ್ವಾಲ್ ಅವರು ಇನಿಂಗ್ಸ್ ನ ಮೊದಲ ಓವರ್ನಲ್ಲೇ ಒಬೆಡ್ ಮೆಕಾಯ್ಗೆ ವಿಕೆಟ್ ಒಪ್ಪಿಸಿದ್ದರು.

ಮೊದಲೆರಡು ಪಂದ್ಯಗಳಲ್ಲಿ ಕಿಶನ್ ಹಾಗೂ ಶುಭಮನ್ ಗಿಲ್ ಮೊದಲ ವಿಕೆಟ್ನಲ್ಲಿ ಕ್ರಮವಾಗಿ 5 ಹಾಗೂ 16 ರನ್ ಸೇರಿಸಿದ್ದರು. ಆರಂಭಿಕ ಬ್ಯಾಟರ್ಗಳ ವೈಫಲ್ಯವು ಮಧ್ಯಮ ಕ್ರಮಾಂಕದ ಮೇಲೆ ಒತ್ತಡವುಂಟು ಮಾಡಿದೆ.

4ನೇ ಪಂದ್ಯದಲ್ಲಿ ಕಿಶನ್ಗೆ ಮತ್ತೆ ಅವಕಾಶ ನೀಡುವ ಕುರಿತು ಗೊಂದಲವಿದೆ. ಟೀಮ್ ಮ್ಯಾನೇಜ್ಮೆಂಟ್ ಈ ನಿರ್ಣಾಯಕ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ಮನ್ಗಳಿಂದ ಭರ್ಜರಿ ಪ್ರದರ್ಶನದ ವಿಶ್ವಾಸದಲ್ಲಿದೆ.

ಭಾರತದ ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟರ್ಗಳ ಕೊರತೆ ಇರುವ ಕಾರಣ ಅಗ್ರ ಸರದಿಯಲ್ಲಿ ಸಿಡಿದೇಳುವುದು ಅನಿವಾರ್ಯವಾಗಿದೆ. ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳಲು ಭಾರತವು 7ನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಗೆ ಅವಕಾಶ ನೀಡುತ್ತಿದೆ.

ಯುವ ಬ್ಯಾಟರ್ ತಿಲಕ್ ವರ್ಮಾ ಜಬಾಬ್ದಾರಿಯುತವಾಗಿ ಅಡುತ್ತಿದ್ದು, ಯುವ ಆಟಗಾರನ ಸಾಧನೆ ಶ್ಲಾಘನೆಗೆ ಒಳಗಾಗಿದೆ. 39 ರನ್(22 ಎಸೆತ), 51 ರನ್(41 ಎಸೆತ) ಹಾಗೂ 49 ರನ್(37 ಎಸೆತ) ಗಳಿಸಿರುವ ಹೈದರಾಬಾದ್ನ ಎಡಗೈ ಬ್ಯಾಟರ್ ವರ್ಮಾ ತನ್ನ ವೃತ್ತಿಜೀವನದಲ್ಲಿ ದೊಡ್ಡ ಸವಾಲು ಎದುರಿಸಲು ಸಜ್ಜಾಗುತ್ತಿದ್ದಾರೆ.

ಕುಲದೀಪ್ ಯಾದವ್ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತ ತಂಡಕ್ಕೆ ವಾಪಸಾಗಿದ್ದರು. ಯಾದವ್ ಅವರ ಪ್ರದರ್ಶನವು ಖಂಡಿತವಾಗಿಯೂ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಹೆಬ್ಬೆರಳಿನ ನೋವಿನಿಂದಾಗಿ ಯಾದವ್ 2ನೇ ಪಂದ್ಯದಲ್ಲಿ ಆಡಿರಲಿಲ್ಲ. ಎಡಗೈ ಸ್ಪಿನ್ನರ್ 3ನೇ ಪಂದ್ಯದಲ್ಲಿ 4 ಓವರ್ಗಳಲ್ಲಿ 28 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.

ಮೂವರು ಸ್ಪಿನ್ನರ್ಗಳಾದ-ಕುಲದೀಪ್, ಅಕ್ಷರ್ ಹಾಗೂ ಯಜುವೇಂದ್ರ ಚಹಾಲ್ ಕಳೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಸಂಘಟಿಸಿದ್ದರು.

ಅಮೆರಿಕದ ಲೌಡರ್ಹಿಲ್ನ ಸೆಂಟ್ರಲ್ ಬ್ರೋವರ್ಡ್ ಸ್ಟೇಡಿಯಮ್ನ ಪಿಚ್ ಆರಂಭದಲ್ಲಿ ಬ್ಯಾಟ್ಸ್ಮನ್ಗಳಿಗೆ ಸಹಕರಿಸುತ್ತದೆ. ಪಂದ್ಯ ಮುಂದುವರಿದಂತೆ ಏರುಪೇರಾಗುತ್ತದೆ. ಇಲ್ಲಿ ಆಡಲಾಗಿರುವ 13 ಪಂದ್ಯಗಳ ಪೈಕಿ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ 11 ಬಾರಿ ಜಯ ಸಾಧಿಸಿದೆ.

ವೆಸ್ಟ್ಇಂಡೀಸ್ 2016ರ ನಂತರ ಮೊದಲ ಬಾರಿ ಭಾರತ ವಿರುದ್ಧ ಸರಣಿ ಗೆಲ್ಲುವ ಅವಕಾಶ ಕಳೆದುಕೊಳ್ಳದಿರಲು ಬಯಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News