ಫ್ರೆಂಚ್ ಓಪನ್: 2ನೇ ಸುತ್ತಿಗೆ ಜೊಕೊವಿಕ್

Update: 2024-05-29 16:22 GMT

 ಜೊಕೊವಿಕ್ | PTI 

ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ನಲ್ಲಿ ಹಾಲಿ ಚಾಂಪಿಯನ್ ಸರ್ಬಿಯದ ನೊವಾಕ್ ಜೊಕೊವಿಕ್ ಎರಡನೇ ಸುತ್ತು ತಲುಪಿದ್ದಾರೆ. ಮಂಗಳವಾರ ನಡೆದ ಮೊದಲ ಸುತ್ತಿನಲ್ಲಿ ವಿಶ್ವದ ಒಂದನೇ ರ್ಯಾಂಕಿಂಗ್ ನ ಜೊಕೊವಿಕ್ 142ನೇ ವಿಶ್ವ ರ್ಯಾಂಕಿಂಗ್ ನ ಫ್ರೆಂಚ್ ವೈಲ್ಡ್ ಕಾರ್ಡ್ ಪಿಯರಿ ಹ್ಯೂಸ್ ಹರ್ಬರ್ಟ್ ರನ್ನು 6-4, 7-6(7/3), 6-4 ಸೆಟ್ ಗಳಿಂದ ಸೋಲಿಸಿದರು.

ಇದು ಫ್ರೆಂಚ್ ಓಪನ್ ನಲ್ಲಿ ಅವರ 93ನೇ ಗೆಲುವಾಗಿದೆ.

2018ರ ಬಳಿಕ ಮೊದಲ ಬಾರಿಗೆ, ಜೊಕೊವಿಕ್ ಯಾವುದೇ ಪ್ರಶಸ್ತಿಯಿಲ್ಲದೆ ಈ ಫ್ರೆಂಚ್ ಓಪನ್ ನಲ್ಲಿ ಆಡಲು ಬಂದಿದ್ದಾರೆ.

“ಅದೊಂದು ಅತ್ಯುತ್ತಮ ನಿರ್ವಹಣೆಯಾಗಿತ್ತು. ಇದಕ್ಕಿಂತಲೂ ಉತ್ತಮ ನಿರ್ವಹಣೆಯನ್ನು ನೀಡಬಹುದಾಗಿತ್ತು. ಆದರೆ, ಅವರು ಉತ್ತಮ ಸರ್ವ್ಗಳನ್ನು ಮಾಡಿದರು. ಅದು ಮೂರು ಸೆಟ್ಗಳ ವಿಜಯವಾಗಿತ್ತು. ಈ ಕ್ಷಣದಲ್ಲಿ ಅದು ಮಹತ್ವದ್ದಾಗಿದೆ. ಕಳೆದ ಕೆಲವು ವಾರಗಳಿಗೆ ಹೋಲಿಸಿದರೆ ನಾನು ಈಗ ಚೆನ್ನಾಗಿದ್ದೇನೆ. ನನ್ನ ಮಾನಸಿಕ ಸ್ಥಿತಿಯ ಬಗ್ಗೆ ತೃಪ್ತಿಯಿದೆ’’ ಎಂದು ಜೊಕೊವಿಕ್ ಅವರು ಹೇಳಿದರು.

ಜೊಕೊವಿಕ್ 2010ರ ಬಳಿಕ, ಫೆಂಚ್ ಓಪನ್ ಪಂದ್ಯಾವಳಿಗಳಲ್ಲಿ ಕ್ವಾರ್ಟರ್ಫೈನಲ್ ಅಥವಾ ಅದಕ್ಕಿಂತ ಮುಂದಿನ ಹಂತಗಳಿಗೆ ತೇರ್ಗಡೆಯಾಗಿದ್ದಾರೆ. ಅವರು ಎರಡನೇ ಸುತ್ತಿನಲ್ಲಿ 63ನೇ ರ್ಯಾಂಕಿಂಗ್ನ ರೋಬರ್ಟೊ ಕಾರ್ಬಲಿಸ್ ಬೇನ ಅವರನ್ನು ಎದುರಿಸಲಿದ್ದಾರೆ.

ಅರೈನಾ ಸಬಲೆಂಕ 2ನೇ ಸುತ್ತಿಗೆ

ಫೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ ನಲ್ಲಿ ಮಂಗಳವಾರ ಬೆಲಾರುಸ್ ನ ಅರೈನಾ ಸಬಲೆಂಕ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸಬಲೆಂಕ ಮೊದಲ ಸುತ್ತಿನಲ್ಲಿ ರಶ್ಯದ ಹದಿಹರಯದ ಎರಿಕಾ ಆ್ಯಂಡ್ರೀವಾರನ್ನು ಕೇವಲ 68 ನಿಮಿಷಗಳಲ್ಲಿ 6-1, 6-2 ಸೆಟ್ ಗಳಿಂದ ಸೋಲಿಸಿದರು.

ವಿಶ್ವದ ಎರಡನೇ ರ್ಯಾಂಕಿಂಗ್ ನ ಆಟಗಾರ್ತಿ ಸಬಲೆಂಕ ತನ್ನ ಎದುರಾಳಿ 100ನೇ ರ್ಯಾಂಕಿಂಗ್ನ ಆ್ಯಂಡ್ರೀವ ವಿರುದ್ಧ 27 ವಿನ್ನರ್ ಗಳನ್ನು ಸಿಡಿಸಿದರು ಮತ್ತು ಎದುರಾಳಿಯ ಐದು ಸರ್ವ್ ಗಳನ್ನು ತುಂಡರಿಸಿದರು.

“ನಾನು ಮಣ್ಣಿನ ಅಂಗಳದಲ್ಲಿ ಉತ್ತಮ ನಿರ್ವಹಣೆ ನೀಡಲು ಪ್ರಯತ್ನಿಸುತ್ತಿದ್ದೇನೆ. ಇಲ್ಲಿನ ಪರಿಸ್ಥಿತಿಗಳು ಕಠಿಣವಾಗಿವೆ. ಆದರೆ, ನಾನು ಇಲ್ಲಿ ಆಡುವುದನ್ನು ಇಷ್ಟಪಡುತ್ತೇನೆ. ಅಂಗಳ ಯಾವುದೇ ಆದರೂ, ನಾನು ಪ್ರತಿ ಕ್ಷಣವೂ ನನ್ನಲ್ಲಿರುವ ಶ್ರೇಷ್ಠ ಟೆನಿಸನ್ನು ಹೊರತರಲು ಪ್ರಯತ್ನಿಸುತ್ತೇನೆ’’ ಎಂದು ಸಬಲೆಂಕ ಹೇಳಿದರು.

2023ರಲ್ಲಿ ಸಬಲೆಂಕ ಫ್ರೆಂಚ್ ಓಪನ್ ನಲ್ಲಿ ಸೆಮಿಫೈನಲ್ ತಲುಪಿದ್ದರು.

ಇನ್ನೊಂದು ಮೊದಲ ಸುತ್ತಿನ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ, ಫ್ರಾನ್ಸ್ನ ಅಲೈಝ್ ಕಾರ್ನೆಟ್ರನ್ನು ಚೀನಾದ ಝೆಂಗ್ ಕಿನ್ವೆನ್ 6-2, 6-1 ಸೆಟ್ಗಳಿಂದ ಮಣಿಸಿದರು.

ಆಸ್ಟ್ರೇಲಿಯನ್ ಓಪನ್ ರನ್ನರ್-ಅಪ್ ಝೆಂಗ್ಗೆ ಕಾರ್ನೆಟ್ ಯಾವುದೇ ರೀತಿಯಲ್ಲಿ ಸರಿಸಾಟಿಯಾಗಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News