ಅಭಿಮಾನಿಗಳು “ಕೊಹ್ಲಿ… ಕೊಹ್ಲಿ…” ಎಂದಿದ್ದಕ್ಕೆ ಏಶ್ಯಾಕಪ್ ಅಂಗಳದಲ್ಲಿ ́ಮಧ್ಯ ಬೆರಳುʼ ತೋರಿಸಿದ ಗೌತಮ್ ಗಂಭೀರ್!
ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯ ಹೆಸರನ್ನು ಅಭಿಮಾನಿಗಳು ಜೋರಾಗಿ ಕೂಗಿದ್ದಕ್ಕೆ, ಭಾರತದ ಮಾಜಿ ಕ್ರಿಕೆಟಿಗ, ಏಶ್ಯಾಕಪ್ ಪ್ರಸಾರ ಮಾಧ್ಯಮ ತಂಡದಲ್ಲಿರುವ ಗೌತಮ್ ಗಂಭೀರ್ ಮಧ್ಯ ಬೆರಳು ತೋರಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕ್ಯಾಂಡಿ : ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯ ಹೆಸರನ್ನು ಅಭಿಮಾನಿಗಳು ಜೋರಾಗಿ ಕೂಗಿದ್ದಕ್ಕೆ, ಭಾರತದ ಮಾಜಿ ಕ್ರಿಕೆಟಿಗ, ಏಶ್ಯಾಕಪ್ ಪ್ರಸಾರ ಮಾಧ್ಯಮ ತಂಡದಲ್ಲಿರುವ ಗೌತಮ್ ಗಂಭೀರ್ ಮಧ್ಯ ಬೆರಳು ತೋರಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅವರ ನಡೆ, ಕ್ರೀಡಾ ಮನೋಭಾವವನ್ನು ನೆಟ್ಟಿಗರು ಟೀಕಿಸಿದ ನಂತರ ಪ್ರತಿಕ್ರಿಯಿಸಿದ ಬಿಜೆಪಿ ಸಂಸದರೂ ಆಗಿರುವ ಗೌತಮ್ ಗಂಭೀರ್, ಗುಂಪಿನಲ್ಲಿದ್ದ ಕೆಲವು ಪಾಕಿಸ್ತಾನದ ಅಭಿಮಾನಿಗಳು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು. ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು. ಅದಕ್ಕಾಗಿಯೇ ನಾನು ಈ ರೀತಿ ಪ್ರತಿಕ್ರಿಯಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು freepressjournal ವರದಿ ಮಾಡಿದೆ.
“ನಿಮ್ಮ ಮುಂದೆ ಯಾರಾದರೂ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರೆ, ಕಾಶ್ಮೀರ ವಿಚಾರಗಳನ್ನು ಪ್ರಸ್ತಾಪಿಸಿದರೆ ನಕ್ಕು ಮುಂದೆ ಸಾಗಲು ಸಾಧ್ಯವಿಲ್ಲ. ಅವರ ಕ್ರಿಯೆಗೆ, ಸ್ವಾಭಾವಿಕವಾಗಿ ನನ್ನ ಪ್ರತಿಕ್ರಿಯೆ ಹಾಗೆ ಬಂತು. ನನ್ನ ದೇಶದ ವಿರುದ್ಧ ಯಾರೂ ಏನೇ ಮಾತನಾಡಿದರೂ, ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ. ಕ್ರಿಕೆಟ್ ನೋಡಲು ಬಂದವರು ಅವರರ ಇಷ್ಟದ ತಂಡಗಳಿಗೆ ಪ್ರೋತ್ಸಾಹ ಮಾಡಿಕೊಂಡು ಹೋಗಲಿ. ಅದು ಬಿಟ್ಟು ಸ್ಟೇಡಿಯಂನೊಳಗಡೆ ರಾಜಕಾರಣ ಮಾಡುವುದು ಸರಿಯಲ್ಲ” ಎಂದು ಭಾರತ ನೇಪಾಳ ತಂಡಗಳ ನಡುವೆ ಏಶ್ಯಾಕಪ್ ಪಂದ್ಯ ನಡೆಯುತ್ತಿದ್ದ ಪಲ್ಲೆಕೆಲೆ ಕ್ರೀಡಾಂಗಣದ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಆದರೆ ವೈರಲ್ ವೀಡಿಯೋದಲ್ಲಿ ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗುತ್ತಿರುವುದು ಮಾತ್ರ ಕೇಳುತ್ತಿದೆ ಎಂದು freepressjournal ವರದಿ ಮಾಡಿದೆ.