ಟೀಮ್ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಮುಂದಿದೆ ಗಂಭೀರ ಸವಾಲು

Update: 2024-07-10 15:31 GMT

ಗೌತಮ್ ಗಂಭೀರ್ | PC : PTI 

ಹೊಸದಿಲ್ಲಿ : ಭಾರತದ ಪುರುಷರ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಮಂಗಳವಾರ ನೇಮಕಗೊಂಡಿರುವ ಮಾಜಿ ಆರಂಭಿಕ ಎಡಗೈ ಆಟಗಾರ ಗೌತಮ್ ಗಂಭೀರ್ ಮುಂದೆ ಎಲ್ಲ ಮೂರು ಮಾದರಿಯಲ್ಲಿ ಬಿಡುವಿಲ್ಲದ ಕ್ರಿಕೆಟ್ ಕ್ಯಾಲೆಂಡರ್ ಇದ್ದು, ಗಂಭೀರ ಸವಾಲುಗಳು ಎದುರಾಗಿವೆ.

ಗಂಭೀರ್ ಅವರು 2021ರಿಂದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಟೆಸ್ಟ್ಗಳು: ಭಾರತವು ಬಾಂಗ್ಲಾದೇಶ(2 ಟೆಸ್ಟ್)ಹಾಗೂ ನ್ಯೂಝಿಲ್ಯಾಂಡ್(3 ಟೆಸ್ಟ್)ವಿರುದ್ಧ ಸ್ವದೇಶದಲ್ಲಿ ಸರಣಿಯನ್ನಾಡಿದ ನಂತರ ಆಸ್ಟ್ರೇಲಿಯಕ್ಕೆ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಕಾಂಗರೂನಾಡಿಗೆ ತೆರಳಲಿದೆ. ಈ ಸರಣಿಗಳು ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ. 2018ರ ನಂತರ ಆಸ್ಟ್ರೇಲಿಯಕ್ಕೆ ಎರಡು ಫಲಪ್ರದ ಪ್ರವಾಸ ಕೈಗೊಂಡ ನಂತರ ತಂಡವು ಮತ್ತೊಂದು ಸರಣಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಡಬ್ಲ್ಯುಟಿಸಿ ಸರಣಿಯು ಗಂಭೀರ್ಗೆ ಕಠಿಣ ಪರೀಕ್ಷೆ ಒಡ್ಡುವ ಸಾಧ್ಯತೆಯಿದೆ.

ಏಕದಿನ: ಶ್ರೀಲಂಕಾ ವಿರುದ್ಧ ವಿದೇಶಿ ನೆಲದಲ್ಲಿ ತಲಾ 3 ಟ್ವೆಂಟಿ20 ಹಾಗೂ ಏಕದಿನ ಸರಣಿಯ ಮೂಲಕ ಗಂಭೀರ್ ಅವರ ಕೋಚಿಂಗ್ ಅವಧಿಯು ಆರಂಭವಾಗಲಿದೆ. 2025ರ ಚಾಂಪಿಯನ್ಸ್ ಟ್ರೋಫಿಗಿಂತ ಮೊದಲು ಮುಂದಿನ ವರ್ಷದ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಆತಿಥ್ಯವಹಿಸಲಿದೆ. 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿದ ನಂತರ ಈ ಮಾದರಿಯಲ್ಲಿ ಭಾರತವು ಪ್ರಶಸ್ತಿಯನ್ನು ಜಯಿಸಿಲ್ಲ. ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಡುವ ಸವಾಲು ಗಂಭೀರ್ಗಿದೆ.

ಟಿ20: ಕೆರಿಬಿಯನ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ ಇತ್ತೀಚೆಗೆ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಪ್ರಶಸ್ತಿ ಜಯಿಸಿದ ನಂತರ ದೇಶಾದ್ಯಂತ ಸಂಭ್ರಮಾಚರಣೆ ನಡೆದಿದೆ. ಆದರೆ ಮೂವರು ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜ ಟಿ20 ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಮುಂದಿನ ಟಿ20 ವಿಶ್ವಕಪ್ಗೆ ಇನ್ನೂ ಎರಡು ವರ್ಷ ಬಾಕಿ ಇದ್ದರೂ ಗಂಭೀರ್ಅವರು ಈ ನಿರ್ಣಾಯಕ ಅವಧಿಯಲ್ಲಿ ತಂಡವನ್ನು ಸಜ್ಜುಗೊಳಿಸಬೇಕಾಗಿದೆ. ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ವೇಳೆ ಮೂವರು ಪ್ರಮುಖ ಆಟಗಾರರಿಂದ ತೆರವಾದ ಸ್ಥಾನಕ್ಕೆ ಬದಲಿ ಆಟಗಾರನನ್ನು ನೇಮಿಸುವ ಜೊತೆಗೆ ನೂತನ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಗಂಭೀರ್ಗಿದೆ.

ಐಪಿಎಲ್ನ ಮೂಲಕ ಸಾಕಷ್ಟು ಆಟಗಾರರು ಹೊರಹೊಮ್ಮುತ್ತಿದ್ದು, ಈ ಎಲ್ಲ ಸಂಪನ್ಮೂಲವನ್ನು ಬಳಸಿಕೊಂಡು 2027ರಲ್ಲಿ ಸ್ವದೇಶದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಭಾರತವನ್ನು ಸನ್ನದ್ಧಗೊಳಿಸಲು ಗಂಭೀರ್ ಪ್ರಯತ್ನ ನಡೆಸಲು ಯೋಚಿಸುತ್ತಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News