ಪೂರ್ಣಾವಧಿ ನಾಯಕನಾಗಿ ಹಾರ್ದಿಕ್ ಪಾಂಡ್ಯ ಸಹಜ ಆಯ್ಕೆ: ಸಿದು

Update: 2024-04-12 16:16 GMT

ರೋಹಿತ್ ಶರ್ಮ , ಹಾರ್ದಿಕ್ ಪಾಂಡ್ಯ | PC : PTI 

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಯಲು ರೋಹಿತ್ ಶರ್ಮ ನಿರ್ಧರಿಸಿದರೆ, ಪೂರ್ಣಾವಧಿ ನಾಯಕನಾಗಿ ಅವರ ಸ್ಥಾನವನ್ನು ತುಂಬಲು ಹಾರ್ದಿಕ್ ಪಾಂಡ್ಯ ಸೂಕ್ತ ಅಭ್ಯರ್ಥಿಯಾಗಿದ್ದಾರೆ ಎಂದು ತಂಡದ ಮಾಜಿ ಆರಂಭಿಕ ಬ್ಯಾಟರ್ ನವಜೋತ್ ಸಿಂಗ್ ಸಿದು ಅಭಿಪ್ರಾಯಪಟ್ಟಿದ್ದಾರೆ.

ಹಲವು ಸಂದರ್ಭಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿರುವ ಪಾಂಡ್ಯ ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದಾರೆ. 2024ರ ಐಪಿಎಲ್ ಋತುವಿನಲ್ಲಿ ಅವರು ನಾಯಕನಾಗಿ ರೋಹಿತ್ ಶರ್ಮರ ಸ್ಥಾನವನ್ನು ವಹಿಸಿಕೊಂಡಿದ್ದಾರೆ.

ಹಾರ್ದಿಕ್ ಭಾರತೀಯ ಕ್ರಿಕೆಟ್ ತಂಡದ ಭವಿಷ್ಯವಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ಸಿದು, ಅವರನ್ನು ನಾಯಕನಾಗಿ ಬೆಳೆಸುವ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಸರಿಯಾದ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.

“ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್ ತಂಡದ ಭವಿಷ್ಯ. ರೋಹಿತ್‍ಗೆ ಈಗ 36- 37 ವರ್ಷ. ಅವರಿನ್ನು ಎರಡು ವರ್ಷ ಆಡಬಹುದು. ಅವರು ಅತ್ಯುತ್ತಮ ಆಟಗಾರ ಮತ್ತು ಶ್ರೇಷ್ಠ ನಾಯಕ. ಅವರೊಂದು ಚಲಿಸುತ್ತಿರುವ ಕವಿತೆಯಂತೆ. ನಾನು ಅವರನ್ನು ನೋಡಿದಾಗಲೆಲ್ಲ, ಸಮಯ ನಿಂತಂತೆ ಭಾಸವಾಗುತ್ತದೆ. ಆದರೆ, ನಾವು ಮುಂದಕ್ಕೆ ನೋಡಬೇಕು ಮತ್ತು ಅವರಿಂದ ನಾಯಕತ್ವವನ್ನು ಪಡೆದುಕೊಳ್ಳುವ ವ್ಯಕ್ತಿಯೊಬ್ಬನನ್ನು ಸಿದ್ಧಪಡಿಸಬೇಕು’’ ಎಂದು ‘ಇಂಡಿಯಾ ಟುಡೆ’ಯೊಂದಿಗೆ ಮಾತನಾಡಿದ ಸಿದು ಹೇಳಿದರು.

“ಟೆಸ್ಟ್ ತಂಡದ ನಾಯಕತ್ವಕ್ಕೆ ನಾನು ಅವರನ್ನು ಶಿಫಾರಸು ಮಾಡುತ್ತಿಲ್ಲ, ಆದರೆ, ಅವರು ಆ ತಂಡದಲ್ಲಿ ಉಪನಾಯಕ ಆಗಬಹುದು. ರೋಹಿತ್ ಇಲ್ಲದಿದ್ದಾಗ, ಸುಮಾರು ಒಂದು ವರ್ಷ ಅವರು ಅಂತರರಾಷ್ಟ್ರೀಯ ಟ್ವೆಂಟಿ20 ಕ್ರಿಕೆಟ್‍ನಲ್ಲಿ ಭಾರತ ತಂಡದ ನಾಯಕನಾಗಿದ್ದರು. ಹಾರ್ದಿಕ್ ನಮ್ಮ ಸಹಜ ಆಯ್ಕೆಯಾಗಿದ್ದಾರೆ. ಅದಕ್ಕಾಗಿಯೇ ಬಿಸಿಸಿಐಯು ಅವರನ್ನು ತಂಡದ ಉಪನಾಯಕನಾಗಿ ನೇಮಿಸಿದೆ. ಬಿಸಿಸಿಐ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಮೊದಲು ಚೆನ್ನಾಗಿ ಯೋಚಿಸುತ್ತದೆ ಮತ್ತು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತದೆ’’ ಎಂದರು.

ಆದರೆ, ಟೆಸ್ಟ್ ಕ್ರಿಕೆಟ್‍ನಲ್ಲಿ ರೋಹಿತ್‍ರಿಂದ ನಾಯಕತ್ವವನ್ನು ಪಡೆಯಲು ಅವರು ಜಸ್ಪ್ರೀತ್ ಬುಮ್ರಾರನ್ನು ಬೆಂಬಲಿಸಿದ್ದಾರೆ. ಇದಕ್ಕೆ ಅವರು ಅರ್ಹರಾಗಿದ್ದಾರೆ ಎಂದಿದ್ದಾರೆ.

“ಕೆಂಪು ಚೆಂಡಿನ ಪಂದ್ಯಗಳನ್ನು (ಟೆಸ್ಟ್ ಕ್ರಿಕೆಟ್) ಪರಿಗಣಿಸುವುದಾದರೆ, ಬಿಸಿಸಿಐಯು ತುಂಬಾ ಮುಂಚಿತವಾಗಿಯೇ ಯೋಜನೆಗಳನ್ನು ರೂಪಿಸಿದೆ. ಜಸ್ಪ್ರೀತ್ ಬುಮ್ರಾ ಇನ್ನೋರ್ವ ಎಲೆಮರೆಯ ಕಾಯಿ. ನಾವು ವಿರಾಟ್ ಕೊಹ್ಲಿ, ಎಮ್.ಎಸ್. ಧೋನಿ ಬಗ್ಗೆ ತುಂಬಾ ಮಾತನಾಡುತ್ತೇವೆ. ಆದರೆ ಜಸ್ಪ್ರೀತ್ ಬುಮ್ರಾ ತನ್ನ ಮೇಲಿನ ನಿರೀಕ್ಷೆಗಳನ್ನು ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದಾರೆ. ಅವರು ಗಾಯದಿಂದ ಹೇಗೆ ಮರಳಿದ್ದಾರೆ ನೋಡಿ. ಮರಳಿದ ಬಳಿಕ ಚೆಂಡಿನಲ್ಲಿ ಅತ್ಯುತ್ತಮ ನಿರ್ವಹಣೆ ನೀಡುತ್ತಿದ್ದಾರೆ’’ ಎಂದು ಸಿದು ಹೇಳಿದರು.

“ಹಾಗಾಗಿ, ಉಪನಾಯಕನ ಪಾತ್ರಕ್ಕೆ ಅವರು ಸಹಜ ಆಯ್ಕೆಯಾಗಿದ್ದಾರೆ. ಜಸ್ಪ್ರೀತ್ ಬುಮ್ರಾರನ್ನು ಟೆಸ್ಟ್ ಕ್ರಿಕೆಟ್ ನಾಯಕನಾಗಿ ಹೊಂದಬಹುದು. ಆದರೆ, ಇಷ್ಟು ಬೇಗೆ ಅದನ್ನು ನಿರ್ಧರಿಸಲು ಸಾಧ್ಯವಾಗಲಾರದು. ನಾಯಕನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಹಲವು ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಬುಮ್ರಾ ಇಂಗ್ಲೆಂಡ್‍ನಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದ್ದಾರೆ. ಹಾಗಾಗಿ, ಅವರಿಗೆ ಅರ್ಹತೆಯಿದೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News