ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್: ಪಾಕ್ ವೇಗಿ ವಸೀಂ ಅಕ್ರಂ ದಾಖಲೆ ಸರಿಗಟ್ಟಿದ ಸ್ಟಾರ್ಕ್

Update: 2023-10-21 15:56 GMT

Photo: twitter/CricCrazyJohns

ಬೆಂಗಳೂರು: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ದಿಗ್ಗಜ ವೇಗಿ ವಸೀಂ ಅಕ್ರಂ ದಾಖಲೆ ಸರಿಗಟ್ಟಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ 1 ವಿಕೆಟ್ ಪಡೆಯುವುದರೊಂದಿಗೆ ಅವರು ಈ ಸಾಧನೆ ಮಾಡಿದರು. ಈ ಪಂದ್ಯವನ್ನು ಆಸ್ಟ್ರೇಲಿಯವು 62 ರನ್ ಅಂತರದಿಂದ ಜಯಿಸಿದೆ.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯವು ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಗಳಿಸಿದ ಅಮೋಘ ಶತಕಗಳ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 45.3 ಓವರ್‌ಗಳಲ್ಲಿ 305 ರನ್ ಗಳಿಸಿ ಆಲೌಟಾಯಿತು.

ಸ್ಟಾರ್ಕ್ ಸಾಧನೆ: ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಈ ತನಕ 22 ಪಂದ್ಯಗಳಲ್ಲಿ ಆಡಿರುವ ಸ್ಟಾರ್ಕ್ 4.80ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟು 55 ವಿಕೆಟ್ ಪಡೆದಿದ್ದಾರೆ. ಆ ಮೂಲಕ ವಿಶ್ವಕಪ್‌ನಲ್ಲಿ ಅಧಿಕ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ವಸೀಂ ಅಕ್ರಂ ಅವರೊಂದಿಗೆ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ.

38 ಪಂದ್ಯಗಳಲ್ಲಿ ಪಾಕ್ ತಂಡವನ್ನು ಪ್ರತಿನಿಧಿಸಿರುವ ವಸೀಂ ಅಕ್ರಂ ಕೂಡ ಸ್ಟಾರ್ಕ್ ಅವರಷ್ಟೇ ವಿಕೆಟ್ ಪಡೆದಿದ್ದಾರೆ.

ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಗ್ಲೆನ್ ಮೆಕ್‌ಗ್ರಾ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅವರು 39 ಪಂದ್ಯಗಳಲ್ಲಿ 71 ವಿಕೆಟ್ ಉರುಳಿಸಿದ್ದಾರೆ.

ಶ್ರೀಲಂಕಾದವರಾದ ಮುತ್ತಯ್ಯ ಮುರಳೀಧರನ್(40 ಪಂದ್ಯ, 68 ವಿಕೆಟ್), ಲಸಿತ್ ಮಾಲಿಂಗ(29 ಪಂದ್ಯ, 56 ವಿಕೆಟ್), ಚಾಮಿಂಡಾ ವಾಸ್(31 ಪಂದ್ಯ, 49 ವಿಕೆಟ್) ಕ್ರಮವಾಗಿ ನಂತರದ ಮೂರು ಸ್ಥಾನದಲ್ಲಿದ್ದಾರೆ.

ಭಾರತದ ಮಾಜಿ ವೇಗಿ ಝಹೀರ್ ಖಾನ್ 23 ಪಂದ್ಯಗಳಲ್ಲಿ 44 ವಿಕೆಟ್‌ಗಳನ್ನು ಪಡೆದಿದ್ದು, ಭಾರತದ ಪರ ಮೊದಲ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News