ಹಾಕಿ: ಭಾರತಕ್ಕೆ ಭವ್ಯ ಕಂಚು | ಸ್ಪೇನ್‌ಗೆ 2-1ರಿಂದ ಸೋಲುಣಿಸಿದ ಹರ್ಮನ್‌ಪ್ರೀತ್ ಸಿಂಗ್ ತಂಡ

Update: 2024-08-08 16:29 GMT

PC : PTI 

ಪ್ಯಾರಿಸ್, ಆ. 8: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ, ಹಾಕಿ ಸ್ಪರ್ಧೆಯಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಬಾರಿಸಿದ ಎರಡು ಗೋಲುಗಳ ನೆರವಿನಿಂದ ಗುರುವಾರ ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿದ ಭಾರತವು ಕಂಚಿನ ಪದಕವನ್ನು ಗೆದ್ದಿದೆ. ಇದರೊಂದಿಗೆ ಭಾರತೀಯ ಹಾಕಿ ತಂಡವು, 52 ವರ್ಷಗಳ ಬಳಿಕ, ಸತತ ಎರಡು ಬಾರಿ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.

ಭಾರತೀಯ ಹಾಕಿ ತಂಡವು ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲೂ ಕಂಚಿನ ಪದಕ ಗೆದ್ದಿತ್ತು. ಈ ಹಿಂದೆ, ಭಾರತವು ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಬೆನ್ನು ಬೆನ್ನಿಗೆ ಪದಕಗಳನ್ನು ಗೆದ್ದಿರುವುದು 1968 ಮತ್ತು 1972ರಲ್ಲಿ.

ಪ್ಯಾರಿಸ್‌ನ ಸ್ಟೇಡ್ ಯವೆಸ್-ಡು-ಮನೋಯಿರ್ ಸ್ಟೇಡಿಯಮ್‌ನಲ್ಲಿ ನಡೆದ ಪುರುಷರ ಹಾಕಿ ಕಂಚಿನ ಪದಕದ ಸ್ಪರ್ಧೆಯಲ್ಲಿ, ಹರ್ಮನ್‌ಪ್ರೀತ್ ಸಿಂಗ್ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.

ಭಾರತಕ್ಕಾಗಿ ತನ್ನ ಕೊನೆಯ ಪಂದ್ಯವನ್ನು ಆಡಿದ ಹಿರಿಯ ಗೋಲ್‌ಕೀಪರ್ ಪಿ.ಆರ್. ಸ್ರೀಜೇಶ್ ಅಮೋಘ ಪ್ರಯತ್ನಗಳ ಮೂಲಕ ಹಲವು ಗೋಲುಗಳನ್ನು ತಡೆದು ಭಾರತದ ವಿಜಯದಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.

ಎರಡು ದಿನಗಳ ಹಿಂದಷ್ಟೇ ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ ಭಾರತೀಯ ಹಾಕಿ ತಂಡವು ಗುರುವಾರ ಗುರುವಾರ ಅಮೋಘವಾಗಿ ಪುಟಿದೆದ್ದಿತು. ಭಾರತೀಯ ತಂಡದ ಸದಸ್ಯರು ದೃಢ ನಿರ್ಧಾರದಿಂದ ಆಡಿ ಭಾರತಕ್ಕೆ ಇನ್ನೊಂದು ಪದಕವನ್ನು ಗೆದ್ದರು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡದ ಅಭಿಯಾನ ಅದ್ಭುತವಾಗಿತ್ತು. ಲೀಗ್ ಹಂತದಲ್ಲಿ ಭಾರತ ತನ್ನ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು. ಇದರಲ್ಲಿ ಬಲಿಷ್ಠ ಆಸ್ಟ್ರೇಲಿಯದ ವಿರುದ್ಧ ಸಂಪಾದಿಸಿದ ಅಮೋಘ ವಿಜಯವೂ ಸೇರಿದೆ. ಬಳಿಕ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ. 40 ನಿಮಿಷಕ್ಕೂ ಅಧಿಕ ಅವಧಿಯಲ್ಲಿ ಭಾರತ ಒಬ್ಬ ಆಟಗಾರನ ಅನುಪಸ್ಥಿತಿಯಲ್ಲಿ ಆಡಿದರೂ ಗ್ರೇಟ್ ಬ್ರಿಟನನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿತು. ಆದರೆ, ಸೆಮಿಫೈನಲ್‌ನಲ್ಲಿ, ತಡವಾಗಿ ಜರ್ಮನಿ ಬಾರಿಸಿದ ಗೋಲಿನಿಂದಾಗಿ ಸೋಲನುಭವಿಸಿತು.

ಆದರೆ, ಅದು ತನ್ನ ಹೋರಾಟದ ಕಿಚ್ಚನ್ನು ಯಾವತ್ತೂ ಕಳೆದುಕೊಳ್ಳಲಿಲ್ಲ. ಕಂಚಿನ ಪದಕದ ಸ್ಪರ್ಧೆಯಲ್ಲಿ ದಿಟ್ಟ ಹೋರಾಟವನ್ನು ನೀಡಿತು.

ಗುರುವಾರ, ಮೊದಲ 30 ನಿಮಿಷಗಳ ಪಂದ್ಯದಲ್ಲಿ ಸ್ಪೇನ್ ಮೇಲುಗೈ ಸಾಧಿಸಿದರೆ, ದ್ವಿತೀಯಾರ್ಧದಲ್ಲಿ ಭಾರತ ಪ್ರಾಬಲ್ಯ ಗಳಿಸಿತು. ಮೊದಲಾರ್ಧದಲ್ಲಿ, ಸ್ಪೇನ್ ಆಟಗಾರರು ಶಕ್ತಿಶಾಲಿ ಪ್ರದರ್ಶನ ನೀಡಿ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು. ಅವರ ಆಕ್ರಮಣಕಾರಿ ಆಟವು ಭಾರತೀಯ ರಕ್ಷಣಾ ಆಟಗಾರರ ಮೇಲೆ ನಿರಂತರ ಒತ್ತಡ ಹೇರಿತು. ಅದೂ ಅಲ್ಲದೆ, ಸ್ಪೇನ್ ರಕ್ಷಣಾ ಆಟಗಾರರ ಸಾಂದರ್ಭಿಕ ಮಧ್ಯಪ್ರವೇಶಗಳು ಭಾರತೀಯ ಮುಂಚೂಣಿ ಆಟಗಾರರನ್ನು ತಡೆದವು.

ಹಾಗಾಗಿಯೇ, 18ನೇ ನಿಮಿಷದಲ್ಲಿ ಸ್ಪೇನ್ ಮೊದಲ ಗೋಲು ಬಾರಿಸಿತು. ಪೆನಾಲ್ಟಿ ಸ್ಟ್ರೋಕ್ ಒಂದನ್ನು ಗೋಲಾಗಿ ಪರಿವರ್ತಿಸುವಲ್ಲಿ ಮಾರ್ಕ್ ಮಿರಾಲ್ಸ್ ಯಶಸ್ವಿಯಾದರು.

ಈ ಹಿನ್ನಡೆಯ ಹೊರತಾಗಿಯೂ, ಮೊದಲಾರ್ಧದ ಅಂತಿಮ ಕ್ಷಣಗಳಲ್ಲಿ ಭಾರತ ತಿರುಗೇಟು ನೀಡಿತು. ಕೇವಲ 21 ಸೆಕೆಂಡ್‌ಗಳು ಬಾಕಿಯಿರುವಾಗ, ಭಾರತಕ್ಕೆ ಪೆನಾಲ್ಟಿ ಕಾರ್ನರೊಂದು ಲಭಿಸಿತು. ಒಲಿಂಪಿಕ್ಸ್ ಉದ್ದಕ್ಕೂ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿರುವ ಭಾರತೀಯ ತಂಡದ ನಾಯಕ ಇದನ್ನೂ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಮಧ್ಯವಿರಾಮದ ವೇಳೆಗೆ ಅಂಕವು 1-1ರಲ್ಲಿ ಸಮಬಲದಲ್ಲಿತ್ತು.

ದ್ವಿತೀಯಾರ್ಧದಲ್ಲಿ ಭಾರತವು ಮೇಲುಗೈ ಸಾಧಿಸಿತು. 33ನೇ ನಿಮಿಷದಲ್ಲಿ ಇನ್ನೊಂದು ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದ ಹರ್ಮನ್‌ಪ್ರೀತ್ ಸಿಂಗ್ ಭಾರತಕ್ಕೆ 2-1ರ ಮುನ್ನಡೆಯೊದಗಿಸಿದರು.

ಈ ಮುನ್ನಡೆಯನ್ನು ಕೊನೆಯವರೆಗೂ ಉಳಿಸಿಕೊಳ್ಳುವಲ್ಲು ಭಾರತ ಯಶಸ್ವಿಯಾಯಿತು.

ಇದು ಹಾಕಿಯಲ್ಲಿ ಭಾರತದ 13ನೇ ಪದಕವಾಗಿದೆ. ಭಾರತ ಈವರೆಗೆ 8 ಚಿನ್ನ, ಒಂದು ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದಿದೆ.

ಈ ಸಾಧನೆ ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯಲಿದೆ. ಒಲಿಂಪಿಕ್ಸ್‌ನಲ್ಲಿ ಉಜ್ವಲವಾಗಿ ಬೆಳಗಿರುವ ಭಾರತೀಯ ಹಾಕಿ ತಂಡವು ಕಂಚಿನ ಪದಕವನ್ನು ಮನೆಗೆ ತಂದಿದೆ. ಇದು ಒಲಿಂಪಿಕ್ಸ್‌ನಲ್ಲಿ ಅವರ ಸತತ ಎರಡನೇ ಪದಕವಾಗಿದೆ. ಅವರ ಪರಿಣತಿ, ಕಠಿಣ ಪರಿಶ್ರಮ ಮತ್ತು ತಂಡ ಮನೋಭಾವಕ್ಕೆ ಸಿಕ್ಕಿದ ಯಶಸ್ಸು ಇದಾಗಿದೆ. ಆಟಗಾರರಿಗೆ ಅಭಿನಂದನೆಗಳು.

ಪ್ರತಿಯೊಬ್ಬ ಭಾರತೀಯ ಹಾಕಿಯೊಂದಿಗೆ ಭಾವನಾತ್ಮಕ ನಂಟನ್ನು ಹೊಂದಿದ್ದಾರೆ. ಈ ಸಾಧನೆಯು ದೇಶದ ಯುವಕರಲ್ಲಿ ಈ ಕ್ರೀಡೆಯನ್ನು ಇನ್ನಷ್ಟು ಜನಪ್ರಿಯಗೊಳಿಸಿದೆ.

-ಪ್ರಧಾನಿ ನರೇಂದ್ರ ಮೋದಿ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News