ಪ್ರಶ್ನೆಗೆ ಉತ್ತರಿಸಲಾಗಿದೆ ಎಂದು ಭಾವಿಸುತ್ತೇನೆ; ತಮ್ಮ ಫಿಟ್ನೆಸ್ ಟೀಕಿಸುತ್ತಿದ್ದವರಿಗೆ ಕೆ.ಎಲ್.ರಾಹುಲ್ ತಿರುಗೇಟು
ರಾಜ್ ಕೋಟ್: ಭಾರತ ತಂಡದ ಪ್ರಮುಖ ಬ್ಯಾಟರ್ ಕೆ.ಎಲ್.ರಾಹುಲ್ ಮತ್ತೆ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳಿರುವುದು ಏಕದಿನ ವಿಶ್ವಕಪ್ ಪಂದ್ಯಾವಳಿ ಶುರುವಾಗುವುದಕ್ಕೂ ಮುನ್ನ ಭಾರತ ತಂಡಕ್ಕೆ ದೊಡ್ಡ ಉತ್ತೇಜನ ದೊರೆತಂತಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ಆದ ಕೆ.ಎಲ್.ರಾಹುಲ್, ಇತ್ತೀಚೆಗೆ ಮುಕ್ತಾಯಗೊಂಡ ಏಶ್ಯಾ ಕಪ್ ನ ಸೂಪರ್ 4 ಹಂತದಲ್ಲಿ ತಮ್ಮ ಲಯಕ್ಕೆ ಮರಳಿದ್ದರು. ಹೀಗಿದ್ದೂ ಕಳೆದ 6 ತಿಂಗಳಿನಿಂದ ಅವರು ಯಾವುದೇ ಪಂದ್ಯಗಳನ್ನಾಡದೆ ಇರುವುದರಿಂದ ಈಗಲೂ ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಕಳವಳ ಉಳಿದೇ ಇದೆ. ಇಂಥ ಹೊತ್ತಿನಲ್ಲಿ ತಮ್ಮ ದೈಹಿಕ ಸಾಮರ್ಥ್ಯದ ಕುರಿತು ತೂರಿ ಬಂದ ಪ್ರಶ್ನೆಗೆ, “ಪ್ರಶ್ನೆಗೆ ಉತ್ತರಿಸಲಾಗಿದೆ ಎಂದು ನಾನು ಭಾವಿಸಿದ್ದೇನೆ” ಎಂದು ಕೆ.ಎಲ್.ರಾಹುಲ್ ತಿರುಗೇಟು ನೀಡಿದ್ದಾರೆ ಎಂದು ndtv.com ವರದಿ ಮಾಡಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಭಾರತ ತಂಡದ ಸಾರಥ್ಯ ವಹಿಸಿಕೊಂಡಿರುವ ಕೆ.ಎಲ್.ರಾಹುಲ್, ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಉತ್ತಮ ಮುನ್ನುಡಿಯನ್ನೇ ಬರೆದಿದ್ದಾರೆ. ತಮ್ಮ ನಾಯಕತ್ವ ಪಾತ್ರದ ಕುರಿತು ಪ್ರತಿಕ್ರಿಯಿಸಿರುವ ಅವರು, “ಕಳೆದ ಎರಡು ವರ್ಷಗಳಿಂದ ತಂಡದ ಆಡಳಿತ ಮಂಡಳಿಯು ನನ್ನ ಮೇಲೆ ಅಪಾರವಾದ ವಿಶ‍್ವಾಸ ವ್ಯಕ್ತಪಡಿಸಿದೆ. ಅವರು ನನಗೆ ಹೆಚ್ಚು ಹೆಚ್ಚು ಹೊಣೆಗಾರಿಕೆ ನೀಡುತ್ತಿದ್ದು, ಅವರು ನನ್ನ ಸಾಮರ್ಥ್ಯದ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಗೆ ಇದು ದ್ಯೋತಕ. ಇದರಿಂದ ನನಗೆ ಸಾಕಷ್ಟು ಆತ್ಮವಿಶ್ವಾಸ ಮೂಡಿದ್ದು, ನಾನೂ ಕೂಡಾ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಸಂತಸಗೊಂಡಿದ್ದೇನೆ. ಇದರಿಂದ ಜೀವನ ಮತ್ತು ಕ್ರಿಕೆಟ್ ಆಡುವುದು ನನ್ನ ಪಾಲಿಗೆ ಮತ್ತಷ್ಟು ಮೋಜಿನದಾಗಿ ಪರಿಣಮಿಸಿದೆ” ಎಂದು ಹೇಳಿದ್ದಾರೆ.
ತಂಡಕ್ಕೆ ಮರಳಿದ ನಂತರ ಕೆ.ಎಲ್.ರಾಹುಲ್ ಪಾಕಿಸ್ತಾನದ ವಿರುದ್ಧ ಶತಕ ಸಿಡಿಸಿದ್ದರೆ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 63 ಬಾಲ್ ಗಳಲ್ಲಿ ಅಜೇಯ 58 ರನ್ ಗಳಿಸಿದ್ದಾರೆ.