ಸೆಕ್ಯುರಿಟಿ ಗಾರ್ಡ್ ನಿಂದ ವೆಸ್ಟ್ ಇಂಡೀಸ್ ನ ಯಶಸ್ವಿ ಬೌಲರ್‌ ವರೆಗೆ; ಶಮರ್ ಜೋಸೆಫ್ ರ ಸ್ಫೂರ್ತಿದಾಯಕ ಪಯಣ...

Update: 2024-01-29 11:22 GMT

ಶಮರ್ ಜೋಸೆಫ್ (PTI)

ಬ್ರಿಸ್ಬೇನ್: ಮೂರು ವರ್ಷಗಳ ನಂತರ ತಮ್ಮ ಕೋಟೆಯನ್ನು ಭಾರತಕ್ಕೆ ಒಪ್ಪಿಸಿದ ನಂತರ, ಆಸ್ಟ್ರೇಲಿಯಾ ತಂಡವು ಗಬ್ಬಾ ಕ್ರೀಡಾಂಗಣದಲ್ಲಿ ಮತ್ತೊಂದು ಆಘಾತಕಾರಿ ಸೋಲು ಅನುಭವಿಸಿದೆ. ಈ ಬಾರಿ ಆಘಾತ ನೀಡಿದ್ದು ವೆಸ್ಟ್ ಇಂಡೀಸ್ ತಂಡ. ಅಡಿಲೇಡ್ ಟೆಸ್ಟ್ ನಲ್ಲಿ ಅತಿಥೇಯರ ವಿರುದ್ಧ ಸೋತು 0-1 ಹಿನ್ನಡೆ ಅನುಭವಿಸಿದ್ದ ಪ್ರವಾಸಿ ವೆಸ್ಟ್ ಇಂಡೀಸ್ ತಂಡವು, ಆಸ್ಟ್ರೇಲಿಯನ್ನರ ತವರಿನಲ್ಲೇ ಛಲದಿಂದ ತಿರುಗಿ ಬಿದ್ದಿದೆ. ಬ್ರಿಸ್ಬೇನ್ ನಲ್ಲಿ 216 ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ಆಸ್ಟ್ರೇಲಿಯ ತಂಡವನ್ನು ವೆಸ್ಟ್ ಇಂಡೀಸ್ ತಂಡದ ವೇಗದ ಬೌಲರ್ ಸಮರ್ ಜೋಸೆಫ್ ಧೂಳೀಪಟ ಮಾಡಿ ಇತಿಹಾಸ ಬರೆದಿದ್ದಾರೆ.

ಶನಿವಾರ ಆಸ್ಟ್ರೇಲಿಯಾ ಬೌಲರ್ ಮಿಚೆಲ್ ಸ್ಟಾರ್ಕ್ ಎಸೆದ ಯಾರ್ಕರ್ ನಲ್ಲಿ ಕಾಲಿನ ಬೆರಳಿಗೆ ಗಾಯವಾಗಿದ್ದುದರಿಂದ ಜೋಸೆಫ್ ಸ್ಕ್ಯಾನಿಂಗ್ ಮೊರೆ ಹೋಗಬೇಕಾಗಿ ಬಂದಿತ್ತು. ರವಿವಾರ 216 ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ಆಸ್ಟ್ರೇಲಿಯಾ ತಂಡವನ್ನು ಕಟ್ಟಿ ಹಾಕಿದ ಶಮರ್ ಜೋಸೆಫ್ ಕೇವಲ 68 ರನ್ ನೀಡಿ 7 ವಿಕೆಟ್ ಕಿತ್ತರು. ಆ ಮೂಲಕ ವೆಸ್ಟ್ ಇಂಡೀಸ್ ತಂಡವು 8 ರನ್ ಗಳ ರೋಚಕ ಜಯ ಸಾಧಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಜೋಸೆಫ್ ಮಾರಕ ಬೌಲಿಂಗ್ ದಾಳಿಗೆ ನಲುಗಿ ಹೋದ ಆಸ್ಟ್ರೇಲಿಯಾ ತಂಡ, ಕೇವಲ 207 ರನ್ ಗೆ ತನ್ನ ಗಂಟು ಮೂಟೆ ಕಟ್ಟಿತು.

ಎರಡನೆಯ ಟೆಸ್ಟ್ ಪಂದ್ಯದಲ್ಲಿ ಒಟ್ಟು ಎಂಟು ವಿಕೆಟ್ ಗಳಿಸಿದ ಜೋಸೆಫ್, ಎರಡನೆ ಇನಿಂಗ್ಸ್ ಒಂದರಲ್ಲೇ 7 ವಿಕೆಟ್ ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಎರಡು ಟೆಸ್ಟ್ ಪಂದ್ಯಗಳ ಈ ಸರಣಿಯಲ್ಲಿ ಒಟ್ಟು 13 ವಿಕೆಟ್ ಗಳನ್ನು ಕೀಳುವ ಮೂಲಕ ಸರಣಿಯಲ್ಲಿ ಎರಡನೆ ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್ ಎಂಬ ಹಿರಿಮೆಗೆ ಭಾಜನರಾದರು.

ಆದರೆ, ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಹಿಂದೆ ಜೋಸೆಫ್ ಪ್ರಥಮ ದರ್ಜೆಯ ಕ್ರಿಕೆಟರ್ ಕೂಡಾ ಆಗಿರಲಿಲ್ಲ. 2021ರಲ್ಲಿ ಭಾರತ ತಂಡವು ಗಬ್ಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದಾಗ, ಜೋಸೆಫ್ ಬರ್ಬೈಸ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು . The Indian Express ಸುದ್ದಿ ಸಂಸ್ಥೆ ಪ್ರಕಾರ, ಗಯಾನಾದಿಂದ ಹೊರ ವಲಯದಲ್ಲಿರುವ ಪ್ರದೇಶದ ನಿವಾಸಿಯಾದ ಈ ಎಡಗೈ ವೇಗದ ಬೌಲರ್ ಜೋಸೆಫ್, ಹಣ್ಣುಗಳು ಅಥವಾ ಕರಗಿಸಿದ ಪ್ಲಾಸ್ಟಿಕ್ ಬಾಟಲ್ ಗಳನ್ನು ಚೆಂಡಾಗಿ ಪರಿವರ್ತಿಸಿ, ತಮ್ಮ ಸೋದರ ಸಂಬಂಧಿಯೊಂದಿಗೆ ಅದನ್ನು ಬಳಸಿ ಕ್ರಿಕೆಟ್ ಆಡುತ್ತಿದ್ದರು ಎಂದು ಹೇಳಲಾಗಿದೆ.

ಚರ್ಚ್ ನಲ್ಲಿ ಸೇವೆ ಸಲ್ಲಿಸಬೇಕಾದ ಶನಿವಾರದಂದು ಜೋಸೆಫ್ ಗೆ ಕ್ರಿಕೆಟ್ ಆಡಲು ಅವಕಾಶ ದೊರೆಯುತ್ತಿರಲಿಲ್ಲ. ಅವರು ಕೇವಲ ರವಿವಾರದಂದು ಮಾತ್ರ ಕ್ರಿಕೆಟ್ ಆಡಬೇಕಾಗುತ್ತಿತ್ತು. ಇದರ ಬೆನ್ನಿಗೇ, ಉದ್ಯಮಿಯಾಗಿ ಬದಲಾಗಿರುವ ಗಯಾನಾದ ಮಾಜಿ ಕ್ರಿಕೆಟಿಗ ಡೇಮಿಯನ್ ವಾಂಟುಲ್ ಅವರನ್ನು ಭೇಟಿಯಾದ ನಂತರ ಜೋಸೆಫ್ ರ ಅದೃಷ್ಟವೇ ಬದಲಾಯಿತು.

ಜೋಸೆಫ್ ರ ವೃತ್ತಿ ಜೀವನವನ್ನು ರೂಪಿಸುವಲ್ಲಿ ವಾಂಟುಲ್ ಮಹತ್ವದ ಪಾತ್ರ ನಿರ್ವಹಿಸಿದರು ಹಾಗೂ ಜೋಸೆಫ್ ದೊಡ್ಡ ಹಂತದಲ್ಲಿ ಆಡುವಂತೆ ಸಹಕರಿಸಿದರು. ಒಮ್ಮೆ ಜೋಸೆಫ್ ಮನೆ ತೊರೆದು, ಪೂರ್ಣ ಪ್ರಮಾಣದಲ್ಲಿ ಕ್ಲಬ್ ಕ್ರಿಕೆಟ್ ಆಡಲು ಪ್ರಾರಂಭಿಸುತ್ತಿದ್ದಂತೆಯೆ, ಜನರು ಅವರನ್ನು ಗುರುತಿಸಲು ಪ್ರಾರಂಭಿಸಿದರು. ಶೀಘ್ರದಲ್ಲೇ ಅವರು ಗಯಾನಾ ರಾಷ್ಟ್ರೀಯ ಶ್ರೇಯಾಂಕದ ಆಟಗಾರರಾಗಿ ಬದಲಾದರು.

ಅಂತಾರಾಷ್ಟ್ರೀಯ ವೃತ್ತಿ ಜೀವನ

ಕ್ರಿಕೆಟ್ ದಂತಕತೆ ಬ್ರಯಾನ್ ಲಾರಾರಿಂದ ಟೆಸ್ಟ್ ಕ್ಯಾಪ್ ಪಡೆದ ಜೋಸೆಫ್, ಅಡಿಲೇಡ್ ಟೆಸ್ಟ್ ನ ಪ್ರಥಮ ಓವರ್ ನಲ್ಲೇ ತಮ್ಮ ಗುರುತು ಮೂಡಿಸಿದರು. ಅವರು ತಮ್ಮ ಪ್ರಥಮ ಓವರ್ ನ ಪ್ರಥಮ ಚೆಂಡಿನಲ್ಲೇ ಆಸ್ಟ್ರೇಲಿಯಾ ತಂಡದ ಉಪ ನಾಯಕ ಸ್ಟೀವ್ ಸ್ಮಿತ್ ಅವರ ವಿಕೆಟ್ ಕಿತ್ತರು. ಅತ್ತ ವೀಕ್ಷಕ ವಿವರಣೆಗಾರರ ಅಂಕಣದಲ್ಲಿದ್ದ ಲಾರಾ ಮೊಗದಲ್ಲಿ ನಸು ನಗು ಮನೆ ಮಾಡಿತ್ತು.

ತಮ್ಮ ಚೊಚ್ಚಲ ಪಂದ್ಯದಲ್ಲಿ ಜೋಸೆಫ್ ಐದು ವಿಕೆಟ್ ಕಿತ್ತರಾದರೂ, ಎರಡನೆ ಇನಿಂಗ್ಸ್ ನಲ್ಲಿ ವಿಕೆಟ್ ರಹಿತರಾಗಿ ಕೈಚೆಲ್ಲಬೇಕಾಯಿತು. ಹೀಗಾಗಿ ಅಡಿಲೇಡ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 10 ವಿಕೆಟ್ ಗಳಿಂದ ಪರಾಭವಗೊಂಡಿತ್ತು. ಅದರ ಸೇಡನ್ನು ಗಬ್ಬಾ ಮೈದಾನದಲ್ಲಿ ತೀರಿಸಿಕೊಂಡಿರುವ ಜೋಸೆಫ್, ಸರಣಿ ಸಮಬಲಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಬ್ರಿಸ್ಬೇನ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೇವಲ ಒಂದು ವಿಕೆಟ್ ಕಿತ್ತಿದ್ದ ಜೋಸೆಫ್, ಎರಡನೆ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವು 216 ರನ್ ಗಳ ಮೊತ್ತವನ್ನು ಬೆನ್ನಟ್ಟಿದ್ದಾಗ, ಮೂಳೆ ಮುರಿತವಾಗಿದ್ದರೂ, ಛಲ ಬಿಡದೆ 7 ವಿಕೆಟ್ ಕಿತ್ತರು. ಆ ಮೂಲಕ ವೆಸ್ಟ್ ಇಂಡೀಸ್ ಪಾಲಿಗೆ ಬ್ರಿಸ್ಬೇನ್ ಗೆಲುವಿನ ನೆನಪು ದೀರ್ಘ ಕಾಲ ಉಳಿಯುವಂತೆ ಮಾಡಿದರು.

ಸ್ವದೇಶಿ ವೃತ್ತಿ ಜೀವನ

ಜೋಸೆಫ್ ಈವರೆಗೆ 6 ಪ್ರಥಮ ದರ್ಜೆ ಪಂದ್ಯಗಳು, 2 ಎ ಪಟ್ಟಿ ಪಂದ್ಯಗಳು ಹಾಗೂ ಹಲವಾರು ಟಿ-20 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ ಅವರ ಖಾತೆಯಲ್ಲಿ 26 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದ ವಿಕೆಟ್ ಗಳು, ಎ ಪಟ್ಟಿಯ ಕ್ರಿಕೆಟ್ ಪಂದ್ಯದ 2 ವಿಕೆಟ್ ಗಳಿವೆ. ಟಿ-20 ಪಂದ್ಯದಲ್ಲಿ ಅವರ ಖಾತೆಗಿನ್ನೂ ಯಾವುದೇ ವಿಕೆಟ್ ಜಮೆಯಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News