"ನಾನು ಹಾಗೆ ಮಾಡಬಾರದಿತ್ತು": ಏಷ್ಯಾಕಪ್ ಪಂದ್ಯದಲ್ಲಿ ಪ್ರೇಕ್ಷಕರತ್ತ ಅಶ್ಲೀಲ ಸನ್ನೆ ತೋರಿಸಿ ವಿವಾದಕ್ಕೀಡಾಗಿದ್ದ ಗೌತಮ್ ಗಂಭೀರ್

Update: 2023-12-09 13:31 GMT

Photo: PTI

ಹೊಸದಿಲ್ಲಿ: 2011ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಭಾರತದ ಮಾಜಿ ಬ್ಯಾಟರ್ ಗೌತಮ್ ಗಂಭೀರ್, ಈ ವರ್ಷದ ಸೆಪ್ಟೆಂಬರ್ ನಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಪ್ರೇಕ್ಷಕರತ್ತ ಅಶ್ಲೀಲ ಸನ್ನೆ ತೋರಿಸಿದ ಬಗ್ಗೆ, ನಾನು ಹಾಗೆ ಮಾಡಬಾರದಿತ್ತು ಎಂದು ಹೇಳಿದ್ದಾರೆ. ಪ್ರೇಕ್ಷಕರಲ್ಲಿ ಕೆಲವು ಅಭಿಮಾನಿಗಳು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಸ್ಮಿತಾ ಪ್ರಕಾಶ್ ಅವರೊಂದಿಗೆ ANI ಪಾಡ್ಕ್ಯಾಸ್ಟ್ ನಲ್ಲಿ ಗಂಭೀರ್ ಈ ವಿಷಯದ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಪ್ರತಿಯೊಬ್ಬರೂ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ವಿಭಿನ್ನ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಗಂಭೀರ್ ವಿವರಿಸಿದ್ದಾರೆ.

ಏಷ್ಯಾಕಪ್ ಪಂದ್ಯದ ವೇಳೆ, ಗಂಭೀರ್ ಅವರು ವಿರಾಟ್ ಕೊಹ್ಲಿಯನ್ನು ಶ್ಲಾಘಿಸುವ ಘೋಷಣೆಗಳನ್ನು ಕೇಳಿ, ತಪ್ಪಾಗಿ ಅರ್ಥೈಸಿಕೊಂಡು ತಮ್ಮ ಮಧ್ಯದ ಬೆರಳನ್ನು ಅಭಿಮಾನಿಗಳ ಕಡೆಗೆ ತೋರಿಸಿದರು.

" ಕಲವು ಅಭಿಮಾನಿಗಳು 'ಹಿಂದೂಸ್ತಾನ್ ಮುರ್ದಾಬಾದ್' ಎಂದು ಕೂಗತೊಡಗಿದರು. ಹಾಗೆ ಮಾಡಬೇಡಿ ಎಂದು ಭದ್ರತಾ ಸಿಬ್ಬಂದಿ ಅವರಿಗೆ ಹೇಳಿದರೂ. ಆ ಕ್ಷಣಕ್ಕೆ ನನಗೆ ಒಮ್ಮಲೇ ಕೋಪ ಬಂತು. ನಾನು ಕೂಡಲೇ ಪ್ರತಿಕ್ರಿಯೆಯಾಗಿ ತಪ್ಪು ಸನ್ನೆಯನ್ನು ಮಾಡಿದೆ. ನಾನು ಆ ಸನ್ನೆ ಮಾಡಬಾರದಿತ್ತು ಎಂದು ನಾನು ಒಪ್ಪಿಕೊಳ್ಳುತ್ತೇನೆ" ಎಂದು ಗಂಭೀರ್ ಹೇಳಿದರು.

"ಕೆಲವು ಪತ್ರಕರ್ತರು ನನ್ನ ಪ್ರತಿಕ್ರಿಯೆಯನ್ನು ಮಾತ್ರ ತೋರಿಸಿದರು. ಐಪಿಎಲ್ ಘಟನೆಗೆ ತಳುಕು ಹಾಕಿದರು. ಅದನ್ನೇ ಎಳೆದು ಜಗ್ಗಿದರು. ಒಬ್ಬ ವ್ಯಕ್ತಿಯ ಹೆಸರನ್ನು ಪ್ರೇಕ್ಷಕರು ಜಪಿಸಿದ್ದಕ್ಕೆ ನಾನು ಹಾಗೆ ಮಾಡಿದೆ ಎಂದರು. ಜನರು ಯಾರ ಹೆಸರನ್ನೂ ಜಪಿಸಬಹುದು. ಅದನ್ನು ವೈಯುಕ್ತಿಕವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಯಾರಾದರೂ ನನ್ನ ರಾಷ್ಟ್ರವನ್ನು ನಿಂದಿಸಿದಾಗ, ಹೇಗಾದರೂ ಪ್ರತಿಕ್ರಿಯಿಸಲು ನನಗೆ ಹಕ್ಕಿದೆ. ಆ ಸಂದರ್ಭ ನಾನು ಬಹುಶಃ ಹೆಚ್ಚು ಸಂವೇದನಾಶೀಲನಾಗ ಬಯಸುತ್ತೇನೆ" ಎಂದು ಗಂಭೀರ್ ಘಟನೆಯನ್ನು ವಿವರಿಸಿದ್ದಾರೆ.

ಪೂರ್ವ ದಿಲ್ಲಿಯ ಬಿಜೆಪಿ ಸಂಸದರಾಗಿರುವ ಗಂಭೀರ್ ಅವರು ಕ್ರಿಕೆಟ್ ಕಾಮೆಂಟೇಟರ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದಾರೆ. ಮಾರ್ಚ್ 2009 ರಿಂದ ಏಪ್ರಿಲ್ 2010 ರ ನಡುವೆ ಸತತ ಐದು ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೂ ಗಂಭೀರ್ ಪಾತ್ರರಾಗಿದ್ದಾರೆ.

ಗಂಭೀರ್ ಭಾರತದ ಪರ 58 ಟೆಸ್ಟ್ ಪಂದ್ಯಗಳನ್ನು ಆಡಿ, 41.95 ಸರಾಸರಿಯಲ್ಲಿ 4,154 ರನ್ ಗಳಿಸಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 104 ಇನ್ನಿಂಗ್ಸ್‌ ಗಳಲ್ಲಿ ಒಂಬತ್ತು ಶತಕಗಳು ಮತ್ತು 22 ಅರ್ಧಶತಕಗಳನ್ನು ಗಳಿಸಿದ್ದಾರೆ.

ಗೌತಮ್ ಗಂಭೀರ್ 2009 ರಲ್ಲಿ ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ. 2008 ಮತ್ತು 2009 ರ ನಡುವೆ 13 ಟೆಸ್ಟ ಗಳಲ್ಲಿ, ಅವರು 25 ಇನ್ನಿಂಗ್ಸ್‌ ಗಳಲ್ಲಿ 77.54 ಸರಾಸರಿಯಲ್ಲಿ 1,861 ರನ್ ಗಳನ್ನು ಗಳಿಸಿರುವ ಗಂಭೀರ್ ಗರಿಷ್ಠ 206 ರ ಅತ್ಯುತ್ತಮ ಸ್ಕೋರ್ ನೊಂದಿಗೆ ಅವರು ಏಳು ಶತಕಗಳನ್ನು, 7 ಅರ್ಧ ಶತಕಗಳನ್ನು ಗಳಿಸಿದ್ದಾರೆ.

147 ಏಕದಿನ ಪಂದ್ಯಗಳಲ್ಲಿ, ಅವರು 11 ಶತಕಗಳು ಮತ್ತು 34 ಅರ್ಧಶತಕಗಳೊಂದಿಗೆ 39.68 ರ ಸರಾಸರಿಯಲ್ಲಿ 5,238 ರನ್ ಗಳಿಸಿರುವ ಗಂಭೀರ್, ಅಜೇಯ 150 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News