ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಅಫ್ಘಾನಿಸ್ತಾನದ ಮೊದಲ ಆಟಗಾರ ಇಬ್ರಾಹೀಂ ಝದ್ರಾನ್

Update: 2023-11-07 17:29 GMT

ಇಬ್ರಾಹೀಂ ಝದ್ರಾನ್ (icc-cricket.com)

ಮುಂಬೈ: ಅಗ್ರ ಸರದಿಯ ಬ್ಯಾಟರ್ ಇಬ್ರಾಹೀಂ ಝದ್ರಾನ್ ವಿಶ್ವಕಪ್‌ನಲ್ಲಿ ಶತಕ ದಾಖಲಿಸಿದ ಅಫ್ಘಾನಿಸ್ತಾನದ ಮೊದಲ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.

ಮುಂಬೈನ ವಾಂಖೆಡೆ ಸ್ಟೇಡಿಯಮ್‌ನಲ್ಲಿ ಮಂಗಳವಾರ ನಡೆದ ಆಸ್ಟ್ರೇಲಿಯ ವಿರುದ್ದದ ವಿಶ್ವಕಪ್ ಲೀಗ್ ಪಂದ್ಯದ ವೇಳೆ ಝದ್ರಾನ್ ಈ ಸಾಧನೆ ಮಾಡಿದರು.

21ರ ಹರೆಯದ ಆರಂಭಿಕ ಬ್ಯಾಟರ್ ಝದ್ರಾನ್ ತನ್ನ 27ನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 131 ಎಸೆತಗಳನ್ನು ಎದುರಿಸಿ 7 ಬೌಂಡರಿಗಳ ನೆರವಿನಿಂದ ಮೂರಂಕೆಯನ್ನು ದಾಟಿದರು. ಇದು ಝದ್ರಾನ್ ಅವರ 5ನೇ ಏಕದಿನ ಶತಕವಾಗಿದೆ.

ವೇಗದ ಬೌಲರ್ ಜೋಶ್ ಹೇಝಲ್‌ವುಡ್ ಅವರ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸುವ ಮೂಲಕ ಈ ಮೈಲಿಗಲ್ಲು ತಲುಪಿದರು.

ಟೂರ್ನಮೆಂಟ್‌ನಲ್ಲಿ ಅಚ್ಚರಿಯ ಫಲಿತಾಂಶ ದಾಖಲಿಸುತ್ತಿರುವ ಅಫ್ಘಾನಿಸ್ತಾನ ಹಾಲಿ ಚಾಂಪಿಯನ್ ಇಂಗ್ಲೆಂಡ್, 1992ರ ಚಾಂಪಿಯನ್ ಪಾಕಿಸ್ತಾನ ಹಾಗೂ 1996ರ ಚಾಂಪಿಯನ್ ಶ್ರೀಲಂಕಾ ವಿರುದ್ಧ ಜಯಭೇರಿ ಬಾರಿಸಿದೆ.

ಈ ಹಿಂದೆ 2015ರ ವಿಶ್ವಕಪ್‌ನಲ್ಲಿ ಡುನೆಡಿನ್‌ನಲ್ಲಿ ಸ್ಕಾಟ್‌ಲ್ಯಾಂಡ್ ವಿರುದ್ಧ ಸಮಿವುಲ್ಲಾ ಶಿನ್ವಾರಿ 147 ಎಸೆತಗಳಲ್ಲಿ 96 ರನ್ ಗಳಿಸಿದ್ದರು. ಇದು ವಿಶ್ವಕಪ್‌ನಲ್ಲಿ ಅಫ್ಘಾನ್ ಆಟಗಾರನ ಗರಿಷ್ಠ ವೈಯಕ್ತಿಕ ಸ್ಕೋರಾಗಿತ್ತು.

ಕುತೂಹಲಕಾರಿ ಅಂಶವೆಂದರೆ ಪ್ರಸಕ್ತ ವಿಶ್ವಕಪ್‌ನಲ್ಲಿ ಝದ್ರಾನ್ ಅವರು ಚೆನ್ನೈನಲ್ಲಿ ಪಾಕಿಸ್ತಾನದ ವಿರುದ್ಧ 87 ರನ್ ಗಳಿಸಿದ್ದು ಇದು ವಿಶ್ವಕಪ್‌ನಲ್ಲಿ ಅಫ್ಘಾನ್ ಬ್ಯಾಟರ್‌ನ ಮೂರನೇ ಗರಿಷ್ಠ ಸ್ಕೋರ್ ಆಗಿತ್ತು.

ಝದ್ರಾನ್ ಅವರು ವಿಶ್ವಕಪ್‌ನಲ್ಲಿ ಶತಕ ಗಳಿಸಿರುವ ವಿಶ್ವದ ನಾಲ್ಕನೇ ಯುವ ಆಟಗಾರ ಎನಿಸಿಕೊಂಡಿದ್ದಾರೆ. ಐರ್‌ಲ್ಯಾಂಡ್‌ನ ಪೌಲ್ ಸ್ಟಿರ್ಲಿಂಗ್, ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ಹಾಗೂ ಶ್ರೀಲಂಕಾದ ಅವಿಷ್ಕಾ ಫೆರ್ನಾಂಡೊ ಈ ಸಾಧನೆ ಮಾಡಿದ್ದರು.

ಸಚಿನ್ ಅವರಂತೆ ಬ್ಯಾಟಿಂಗ್ ಮಾಡುತ್ತೇನೆಂದು ಪಂದ್ಯಕ್ಕೂ ಮುನ್ನ ಹೇಳಿದ್ದೆ: ಇಬ್ರಾಹೀಂ ಝದ್ರಾನ್

ಮುಂಬೈ: ನಾನು ಸಚಿನ್ ತೆಂಡುಲ್ಕರ್ ಅವರೊಂದಿಗೆ ಉತ್ತಮ ಚರ್ಚೆ ನಡೆಸಿದ್ದೆ. ಅವರು ತಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು. ಸಚಿನ್ ತೆಂಡುಲ್ಕರ್ ಅವರಂತೆ ಆಡುತ್ತೇನೆಂದು ಈ ಪಂದ್ಯಕ್ಕಿಂತ ಮೊದಲೇ ಹೇಳಿದ್ದೆ. ಅವರು ನನಗೆ ಸಾಕಷ್ಟು ಶಕ್ತಿ ಹಾಗೂ ಆತ್ಮವಿಶ್ವಾಸ ತುಂಬಿದ್ದಾರೆ ಎಂದು ಆಸ್ಟ್ರೇಲಿಯ ವಿರುದ್ಧ ಅಜೇಯ ಶತಕ ಗಳಿಸಿದ ನಂತರ ಅಫ್ಘಾನಿಸ್ತಾನದ ಬ್ಯಾಟರ್ ಇಬ್ರಾಹೀಂ ಝದ್ರಾನ್ ಹೇಳಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ ಔಟಾಗದೆ ಉಳಿದ ಝದ್ರಾನ್ 143 ಎಸೆತಗಳಲ್ಲಿ 129 ರನ್ ಗಳಿಸಿದರು. ಅಫ್ಘಾನ್ ತಂಡ 5 ವಿಕೆಟ್‌ಗೆ 291 ರನ್ ಗಳಿಸಲು ನೆರವಾದರು.

ತೆಂಡುಲ್ಕರ್ ಅವರು ಸೋಮವಾರ ಅಫ್ಘಾನ್ ಕ್ರಿಕೆಟ್ ತಂಡವನ್ನು ಭೇಟಿಯಾದರು. ಸ್ವಲ್ಪ ಸಮಯ ಆಟಗಾರರೊಂದಿಗೆ ಸಂವಾದ ನಡೆಸಿದರು.

ತನ್ನ ಶತಕದ ಶ್ರೇಯಸ್ಸನ್ನು ಸಚಿನ್‌ಗೆ ಸಮರ್ಪಿಸಿದ ಝದ್ರಾನ್, ಅಫ್ಘಾನ್ ಪರ ವಿಶ್ವಕಪ್‌ನಲ್ಲಿ ಚೊಚ್ಚಲ ಶತಕ ಗಳಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಈ ಟೂರ್ನಮೆಂಟ್‌ನಲ್ಲಿ ನಾನು ಕಠಿಣ ಶ್ರಮಪಟ್ಟಿದ್ದೇನೆ. ಪಾಕಿಸ್ತಾನದ ವಿರುದ್ಧ ನಾನು ಶತಕ ಗಳಿಸುವುದರಿಂದ ವಂಚಿತನಾಗಿದ್ದೆ. ಆದರೆ ಇಂದು ಶತಕ ಗಳಿಸುವಲ್ಲಿ ಯಶಸ್ವಿಯಾದೆ. ನಾನು ನನ್ನ ಕೋಚಿಂಗ್ ತಂಡದೊಂದಿಗೆ ಮಾತನಾಡುವಾಗ ಮುಂದಿನ 3 ಪಂದ್ಯಗಳಲ್ಲಿ ಶತಕ ಗಳಿಸುವುದಾಗಿ ಹೇಳಿದ್ದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News