ಐಸಿಸಿ ಏಕದಿನ ರ‍್ಯಾಂಕಿಂಗ್‌: ದ್ವಿತೀಯ ಸ್ಥಾನಕ್ಕೇರಿದ ಭಾರತ, ಅಗ್ರಸ್ಥಾನ ಕಳೆದುಕೊಂಡ ಪಾಕಿಸ್ತಾನ

Update: 2023-09-15 15:21 GMT

Photo- PTI

ಹೊಸದಿಲ್ಲಿ: ಏಶ್ಯಕಪ್ ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತ ಕ್ರಿಕೆಟ್ ತಂಡ ಐಸಿಸಿ ಏಕದಿನ ಟೀಮ್ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೆ ಭಡ್ತಿ ಪಡೆದಿದೆ. ಏಶ್ಯಕಪ್ ಟೂರ್ನಿಯಿಂದ ನಿರ್ಗಮಿಸಿರುವ ಪಾಕಿಸ್ತಾನ ನಂ.1 ರ‍್ಯಾಂಕನ್ನು ಕಳೆದುಕೊಂಡಿದೆ.

ಏಶ್ಯಕಪ್ ಸೂಪರ್-4 ಪಂದ್ಯದಲ್ಲಿ ಗುರುವಾರ ಶ್ರೀಲಂಕಾ ವಿರುದ್ಧ ಕೊನೆಯ ಎಸೆತದಲ್ಲಿ ಸೋಲನುಭವಿಸಿದ್ದ ಬಾಬರ್ ಆಝಂ ನೇತೃತ್ವದ ಪಾಕ್ ತಂಡ ಎರಡು ಸ್ಥಾನ ಕಳೆದುಕೊಂಡು 115 ಅಂಕದೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದೆ. 

ದಕ್ಷಿಣ ಆಫ್ರಿಕಾ ವಿರುದ್ಧ ಸತತ ಗೆಲುವು ದಾಖಲಿಸಿರುವ ಆಸ್ಟ್ರೇಲಿಯವು 118 ಅಂಕದೊಂದಿಗೆ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ ಆಸ್ಟ್ರೇಲಿಯವು ಮೂರನೇ ಏಕದಿನ ಪಂದ್ಯವನ್ನು 111 ರನ್ ಅಂತರದಿಂದ ಸೋತಿರುವ ಹಿನ್ನೆಲೆಯಲ್ಲಿ 116 ಅಂಕ ಗಳಿಸಿರುವ ಭಾರತಕ್ಕೆ ಅಗ್ರ ಸ್ಥಾನಕ್ಕೇರುವ ಅವಕಾಶ ಲಭಿಸುವ ಸಾಧ್ಯತೆಯಿದೆ.

ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾನ ನಡುವಿನ ಸರಣಿಯ ಫೈನಲ್ ಪಂದ್ಯ ರವಿವಾರ ನಡೆಯಲಿದೆ. ನಾಲ್ಕನೇ  ಪಂದ್ಯವು ಶುಕ್ರವಾರ ನಿಗದಿಯಾಗಿದೆ. ರವಿವಾರ ಭಾರತವು ಏಶ್ಯಕಪ್ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ಮುಂದಿನ ತಿಂಗಳು ನಡೆಯಲಿರುವ ಏಕದಿನ ವಿಶ್ವಕಪ್‌ಗಿಂತ ಮೊದಲು ಏಕದಿನ ಟೀಮ್ ರ‍್ಯಾಂಕಿಂಗ್‌ನ ಅಗ್ರ ಸ್ಥಾನಕ್ಕಾಗಿ ಸ್ಪರ್ಧೆ ಏರ್ಪಟ್ಟಿದ್ದು ಸದ್ಯ ಆಸ್ಟ್ರೇಲಿಯವು ಭಾರತಕ್ಕಿಂತ ಎರಡು ಪಾಯಿಂಟ್ಸ್ ಮುನ್ನಡೆಯಲ್ಲಿದೆ.

ಚೆನ್ನೈನಲ್ಲಿ ಅಕ್ಟೋಬರ್ 8ರಂದು  ಭಾರತ ಹಾಗೂ ಆಸ್ಟ್ರೇಲಿಯ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗುವ ಮೊದಲು ಸೆಪ್ಟಂಬರ್ 12ರಿಂದ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News