ಐಸಿಸಿ ಟೆಸ್ಟ್ ರ‍್ಯಾಂಕಿಂಗ್ | ಅಗ್ರಸ್ಥಾನಕ್ಕೆ ವಾಪಸಾದ ಬುಮ್ರಾ, ಟಾಪ್-10ಕ್ಕೆ ಮರಳಿದ ಕೊಹ್ಲಿ
ಹೊಸದಿಲ್ಲಿ : ಕಾನ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಆರು ವಿಕೆಟ್‌ಗಳನ್ನು ಕಬಳಿಸಿರುವ ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಐಸಿಸಿ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ.
30ರ ಹರೆಯದ ಬುಮ್ರಾ ಸಹ ಆಟಗಾರ ಆರ್.ಅಶ್ವಿನ್‌ರಿಂದ ಅಗ್ರಸ್ಥಾನ ವಶಪಡಿಸಿಕೊಂಡರು. ಅಶ್ವಿನ್ ಬಾಂಗ್ಲಾದೇಶ ವಿರುದ್ಧ ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ಸ್ಪಿನ್ನರ್ ರವೀಂದ್ರ ಜಡೇಜ ತನ್ನ ಆರನೇ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನೋರ್ವ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಕೂಡ 16ನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಕಾನ್ಪುರ ಟೆಸ್ಟ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಮೂರನೇ ಸ್ಥಾನ ಪಡೆದಿದ್ದಾರೆ. ತಾನಾಡಿರುವ 11ನೇ ಟೆಸ್ಟ್ ಪಂದ್ಯದಲ್ಲಿ ಈ ಸಾ‘ನೆ ಮಾಡಿದ್ದಾರೆ.
ಜೈಸ್ವಾಲ್ 72 ಹಾಗೂ 51 ರನ್ ಗಳಿಸುವ ಮೂಲಕ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ಮಳೆ ಬಾಧಿತ 2ನೇ ಟೆಸ್ಟ್ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆಲ್ಲುವಲ್ಲಿ ನೆರವಾಗಿದ್ದಾರೆ.
792 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ 22ರ ಹರೆಯದ ಜೈಸ್ವಾಲ್ ಅವರು ಕೇನ್ ವಿಲಿಯಮ್ಸನ್(829)ಹಾಗೂ ಜೋ ರೂಟ್(899)ನಂತರದ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ಭಾರತದ ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಆರು ಸ್ಥಾನ ಮೇಲಕ್ಕೇರಿ ಆರನೇ ಸ್ಥಾನ ಪಡೆಯುವ ಮೂಲಕ ಟಾಪ್-10ಕ್ಕೆ ಮರಳಿದ್ದಾರೆ. ಕಾನ್ಪುರ ಟೆಸ್ಟ್‌ನಲ್ಲಿ ಕೊಹ್ಲಿ ಅವರು 47 ಹಾಗೂ 29 ರನ್ ಗಳಿಸಿದ್ದರು.
ಮೂರು ಸ್ಥಾನ ಕೆಳಜಾರಿ 9ನೇ ಸ್ಥಾನಕ್ಕೆ ತಲುಪಿರುವ ರಿಷಭ್ ಪಂತ್ ಕೂಡ ಟಾಪ್-10ರಲ್ಲಿ ಉಳಿದುಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಕ್ರಮವಾಗಿ 15ನೇ ಹಾಗೂ 16ನೇ ಸ್ಥಾನದಲ್ಲಿದ್ದಾರೆ.
ಟೀಮ್ ರ‍್ಯಾಂಕಿಂಗ್‌ನಲ್ಲಿ ಭಾರತವು 120 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಅಗ್ರ ಸ್ಥಾನದಲ್ಲಿರುವ ಆಸ್ಟ್ರೇಲಿಯಕ್ಕಿಂತ 4 ಅಂಕದಿಂದ ಹಿಂದಿದೆ. 109 ಪಾಯಿಂಟ್ಸ್‌ನೊಂದಿಗೆ ಇಂಗ್ಲೆಂಡ್ ತಂಡವು 3ನೇ ಸ್ಥಾನದಲ್ಲಿದೆ.
ಇದೇ ವೇಳೆ, ‘ಭಾರತೀಯರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯುಟಿಸಿ)ಪಟ್ಟಿಯಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ್ದು 11 ಪಂದ್ಯಗಳಿಂದ 74.24 ಪಾಯಿಂಟ್ ಪರ್ಸಂಟೇಜ್ ಪಡೆದಿದೆ. 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಕ್ಕಿಂತ(12 ಟೆಸ್ಟ್‌ಗಳಲ್ಲಿ 62.50 ಶೇ.)ಮೇಲಿದೆ.