ಭರ್ಜರಿ ಜಯದೊಂದಿಗೆ ಆಫ್ರಿಕಾ ವಿರುದ್ಧದ ಸರಣಿ ಭಾರತದ ಕೈವಶ

Update: 2024-11-16 02:30 GMT

PC: x.com/mufaddal_vohra

ಹೊಸದಿಲ್ಲಿ: ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತದ ಟಿ20 ಯುವಪಡೆ ಶುಕ್ರವಾರ ಜೋಹಾನ್ಸ್ ಬರ್ಗ್ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ 135 ರನ್ ಗಳ ಹೀನಾಯ ಸೋಲುಣಿಸಿ ನಾಲ್ಕು ಪಂದ್ಯಗಳ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿತು.

ಬೆಟ್ಟದಷ್ಟು ಮೊತ್ತವನ್ನು ಬೆನ್ನಟ್ಟಿದ ಆಫ್ರಿಕಾ ಬ್ಯಾಟ್ಸ್ ಮನ್ ಗಳ ಪಾಲಿಗೆ ಭಾರತದ ವೇಗಿ ಅರ್ಷದೀಪ್ ಸಿಂಗ್ ದುಃಸ್ವಪ್ನವಾಗಿ ಕಾಡಿದರು. ಚೆಂಡನ್ನು ಎರಡೂ ಬದಿಗೆ ಸ್ವಿಂಗ್ ಮಾಡುವ ಅದ್ಭುತ ಕೈಚಳಕ ತೋರಿದ ಅರ್ಷದೀಪ್ ಮೊದಲ ಓವರ್ ನಲ್ಲೇ ರೀಝಾ ಹೆಂಡ್ರಿಕ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಬಳಿಕ ಏಡನ್ ಮ್ಯಾಕ್ರ್ರಮ್ ಮತ್ತು ಹೆನ್ರಿಚ್ ಕ್ಲಾಸೆನ್ ವಿಕೆಟ್ ಕಬಳಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇದರಿಂದಾಗಿ ಅತಿಥೇಯ ತಂಡ 3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 10 ರನ್ ಗಳಿಸಿ ತೀವ್ರ ಸಂಕಷ್ಟಕ್ಕೆ ಸಿಲುಕಿತು.

ಅನುಭವಿ ಆಟಗಾರರಾದ ಡೇವಿಡ್ ಮಿಲ್ಲರ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಪ್ರತಿ ಹೋರಾಟ ಸಂಘಟಿಸಿ ಮುಖಭಂಗ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಮಿಲ್ಲರ್ ಅವರನ್ನು ವರುಣ್ ಚಕ್ರವರ್ತಿ ಔಟ್ ಮಾಡುವ ಮುನ್ನ ಈ ಜೋಡಿ 86 ರನ್ ಗಳಿಸಿತು. ಮುಂದಿನ ಎಸೆತದಲ್ಲಿ ರವಿ ಬಿಷ್ಣೋಯಿ ಸ್ಟಬ್ಸ್ ಅವರನ್ನು ಕೆಡವಿದರು. 19ನೇ ಓವರ್ ನಲ್ಲೇ ದಕ್ಷಿಣ ಆಫ್ರಿಕಾ ಇನಿಂಗ್ಸ್ ಕೊನೆಗೊಂಡಿತು. ಇದರ ನಡುವೆಯೂ ದೊಡ್ಡ ಹೊಡೆತಗಳ ಮೂಲಕ ಮಾರ್ಕೋ ಜಾನ್ಸೆನ್ ಸರ್ವಾಂಗೀಣ ಪ್ರದರ್ಶನ ನೀಡಿದರು.

ಇದಕ್ಕೂ ಮುನ್ನ ಆಫ್ರಿಕನ್ನರ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ ಭಾರತೀಯ ಪಡೆ, ಸಂಜು ಸ್ಯಾಮ್ಸನ್ ಅವರ ನಿಖರ ಬ್ಯಾಟಿಂಗ್ ಮತ್ತು ತಿಲಕ್ ವರ್ಮಾ ಅವರ ಭರ್ಜರಿ ಶತಕದ ಮೂಲಕ ಕೇವಲ 1 ವಿಕೆಟ್ ನಷ್ಟಕ್ಕೆ 283 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಇದು ಭಾರತದ ಗರಿಷ್ಠ ಟಿ20 ಸ್ಕೋರ್ ಆಗಿದ್ದು, ದಕ್ಷಿಣ ಆಫ್ರಿಕಾ ನೆಲದಲ್ಲಿ ಗಳಿಸಿದ ಅತಿ ದೊಡ್ಡ ಮೊತ್ತವಾಗಿದೆ. ಒಂದೇ ಇನಿಂಗ್ಸ್ ನಲ್ಲಿ ಇಬ್ಬರು ಭಾರತೀಯರು ಶತಕ ಗಳಿಸಿದ ದಾಖಲೆಯೂ ಈ ಪಂದ್ಯದಲ್ಲಿ ಸೃಷ್ಟಿಯಾಯಿತು. ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಜೋಡಿ ಕೇವಲ 93 ಎಸೆತಗಳಲ್ಲಿ 210 ರನ್ ಗಳನ್ನು ಗಳಿಸಿ ಭಾರತದ ಅತಿದೊಡ್ಡ ದಾಖಲೆಯನ್ನೂ ಸ್ಥಾಪಿಸಿತು.

ಸ್ಯಾಮ್ಸನ್ (56 ಎಸೆತಗಳಲ್ಲಿ ನಾಟೌಟ್ 109) ಮತ್ತು ವರ್ಮಾ (47 ಎಸೆತಗಳಲ್ಲಿ ನಾಟೌಟ್ 120) ಎದುರಾಳಿಗಳನ್ನು ಮನಬಂದಂತೆ ದಂಡಿಸಿದರು. ಸ್ಯಾಮ್ಸನ್ ಕಳೆದ ಐದು ಇನಿಂಗ್ಸ್ ಗಳಲ್ಲಿ ಎರಡು ಶೂನ್ಯ ಸಾಧನೆ ಹಾಗೂ ಮೂರು ಶತಕಗಳನ್ನು ದಾಖಲಿಸಿದ್ದು, ವರ್ಮಾ ಸತತ ಎರಡು ಶತಕ ಗಳಿಸಿದರು. ಸ್ಯಾಮ್ಸನ್ 51 ಎಸೆತಗಳಲ್ಲಿ ಶತಕ ಗಳಿಸಿದರೆ ವರ್ಮಾ ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸಿದರು. ನಾಲ್ಕು ಸಿಕ್ಸರ್ ಗಳ ಮೂಲಕ ಅಭಿಷೇಕ್ ವರ್ಮಾ (18 ಎಸೆತಗಳಲ್ಲಿ 36) ಭರ್ಜರಿ ಆರಂಭ ನೀಡಿದರು. ವರ್ಮಾ 10, ಸ್ಯಾಮ್ಸನ್ 9 ಸೇರಿ ಒಟ್ಟು 23 ಸಿಕ್ಸರ್ ಗಳು ಭಾರತಿಯ ಬ್ಯಾಟ್ಸ್ ಮನ್ ಗಳಿಂದ ಸಿಡಿದವು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News