ಜಾಗತಿಕ ಮಟ್ಟದಲ್ಲಿ 11 ವರ್ಷಗಳಿಂದ ಕಾಡುತ್ತಿದ್ದ ಪ್ರಶಸ್ತಿ ಬರ ನೀಗಿಸಿಕೊಂಡ ಭಾರತ
ಬಾರ್ಬಡೋಸ್ : ವಿರಾಟ್ ಕೊಹ್ಲಿ ಅವರ ವೀರೋಚಿತ ಪ್ರದರ್ಶನ ಹಾಗೂ ರೋಹಿತ್ ಶರ್ಮಾ ಅವರ ಸ್ಫೂರ್ತಿಯುತ ನಾಯಕತ್ವದ ನೆರವಿನಿಂದ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಫೈನಲ್ ಪಂದ್ಯದಲ್ಲಿ 7 ರನ್ ಅಂತರದಿಂದ ಮಣಿಸಿದೆ. ಈ ಮೂಲಕ ಎರಡನೇ ಬಾರಿ ಟಿ20 ವಿಶ್ವಕಪ್ ಜಯಿಸಿದ ಸಾಧನೆ ಮಾಡಿದ ಭಾರತವು ಜಾಗತಿಕ ಮಟ್ಟದಲ್ಲಿ 11 ವರ್ಷಗಳಿಂದ ಕಾಡುತ್ತಿದ್ದ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿದೆ.
ಟಾಸ್ ಜಯಿಸಿದ್ದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಭಾರತವು 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದ್ದು, ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡ ಹೆನ್ರಿಕ್ ಕ್ಲಾಸೆನ್(52 ರನ್, 27 ಎಸೆತ)ಅತ್ಯುತ್ತಮ ಬ್ಯಾಟಿಂಗ್ ಹೊರತಾಗಿಯೂ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಸೋಲೊಪ್ಪಿಕೊಂಡಿದೆ.
ಕಳೆದ ಆರು ತಿಂಗಳಿಂದ ತನ್ನದೇ ಅಭಿಮಾನಿಗಳಿಂದ ಹೀಯಾಳಿಸಲ್ಪಟ್ಟಿದ್ದ ಹಾರ್ದಿಕ್ ಪಾಂಡ್ಯ ಅಂತಿಮ ಓವರ್ನಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿ ಭಾರತವು 2013ರ ನಂತರ ಮೊದಲ ಐಸಿಸಿ ಟ್ರೋಫಿ ಹಾಗೂ ಐಪಿಎಲ್ ಯುಗ ಆರಂಭವಾದ ನಂತರ ಚೊಚ್ಚಲ ಟಿ20 ವಿಶ್ವಕಪ್ ಕಿರೀಟ ಗೆಲ್ಲಲು ನೆರವಾದರು.
ಈ ಫಲಿತಾಂಶವು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಗೆ ಸೂಕ್ತ ವಿದಾಯ ಎನಿಸಿಕೊಂಡಿತು. ಕೊಹ್ಲಿ(76 ರನ್, 59 ಎಸೆತ)ಹಾಗೂ ಅಕ್ಷರ್ ಪಟೇಲ್(47ರನ್, 31 ಎಸೆತ)ಅವರ ಜಂಟಿ ಪ್ರಯತ್ನದ ಫಲವಾಗಿ ಭಾರತವು ಟಿ20 ವಿಶ್ವಕಪ್ ಫೈನಲ್ನಲ್ಲಿ ಗರಿಷ್ಠ ಮೊತ್ತ ಕಲೆ ಹಾಕಿತು.
ಪ್ರಶಸ್ತಿ ವಿಜೇತ ಟೀಮ್ ಇಂಡಿಯಾವು 2.45 ಮಿಲಿಯನ್ ಡಾಲರ್(ಅಂದಾಜು 20.42 ಕೋ.ರೂ.)ಹಾಗೂ ರನ್ನರ್ಸ್ ಅಪ್ ದಕ್ಷಿಣ ಆಫ್ರಿಕಾ ತಂಡ 1.28 ಮಿಲಿಯನ್(ಅಂದಾಜು 10.67 ಕೋ.ರೂ.)ಬಹುಮಾನ ಸ್ವೀಕರಿಸಿದೆ ಎಂದು ಐಸಿಸಿ ತಿಳಿಸಿದೆ.
ಸೆಮಿ ಫೈನಲ್ನಲ್ಲಿ ಕ್ರಮವಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕ ವಿರುದ್ಧ ಸೋಲನುಭವಿಸಿ ಟೂರ್ನಮೆಂಟ್ನಿಂದ ನಿರ್ಗಮಿಸಿದ್ದ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ತಲಾ 787,500 ಯುಎಸ್ಡಾಲರ್(6.56 ಕೋ.ರೂ.)ಸ್ವೀಕರಿಸಿವೆ.