ಭಾರತ-ನ್ಯೂಝಿಲೆಂಡ್ ದ್ವಿತೀಯ ಟೆಸ್ಟ್ | ನ್ಯೂಝಿಲೆಂಡ್ 92/2
ಪುಣೆ: ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ನ್ಯೂಝಿಲೆಂಡ್ ತಂಡವು, ಭೋಜನ ವಿರಾಮದ ವೇಳೆಗೆ ಎರಡು ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದೆ.
ಪ್ರಥಮ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್, ತಂಡದ ಮೊತ್ತ ಕೇವಲ 32 ರನ್ ಆಗಿದ್ದಾಗ ಆರಂಭಿಕ ಆಟಗಾರ ಟಾಮ್ ಲ್ಯಾಥಮ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆಫ್ ಸ್ಪಿನ್ನರ್ ಆರ್.ಅಶ್ವಿನ್ ಬೌಲಿಂಗ್ ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದ ಲ್ಯಾಥಮ್, ಕೇವಲ 15 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು.
ಟಾಮ್ ಲ್ಯಾಥಮ್ ನಂತರ ಕ್ರೀಸಿಗೆ ಬಂದ ವಿಲ್ ಯಂಗ್ ಕೂಡಾ ಹೆಚ್ಚು ಹೊತ್ತು ನಿಲ್ಲದೆ ಕೇವಲ 18 ರನ್ ಗಳಿಸಿ, ಆರ್.ಅಶ್ವಿನ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಆಗ ನ್ಯೂಝಿಲೆಂಡ್ ತಂಡದ ಮೊತ್ತ 76 ಆಗಿತ್ತು.
ನ್ಯೂಝಿಲೆಂಡ್ ತಂಡ ಆರಂಭಿಕ ಆಘಾತಕ್ಕೆ ತುತ್ತಾದರೂ, ಮತ್ತೊಂದು ಬದಿಯಲ್ಲಿ ರಕ್ಷಣಾತ್ಮಕ ಆಟ ಆಡುತ್ತಿರುವ ಡ್ವೇನ್ ಕಾನ್ವೆ, 47 ರನ್ ಗಳಿಸಿದ್ದಾರೆ. ಅವರು ಅರ್ಧ ಶತಕ ಗಳಿಸಲು ಇನ್ನು 3 ರನ್ ಗಳ ಅಗತ್ಯ ಮಾತ್ರವಿದೆ. ನಾಲ್ಕನೆಯ ಸರದಿಯಲ್ಲಿ ಬ್ಯಾಟಿಂಗ್ ಗೆ ಆಗಮಿಸಿರುವ ಪ್ರಥಮ ಟೆಸ್ಟ್ ಶತಕ ವೀರ ರಚಿನ್ ರವೀಂದ್ರ, 5 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ.
ಭಾರತದ ಪರ ಯಶಸ್ವಿ ಬೌಲರ್ ಆದ ಆರ್.ಅಶ್ವಿನ್, 12 ಓವರ್ ಗಳಲ್ಲಿ 33 ರನ್ ನೀಡಿ 2 ವಿಕೆಟ್ ಕಬಳಿಸಿದರು.