ಭಾರತ-ಬಾಂಗ್ಲಾದೇಶ ಗ್ವಾಲಿಯರ್ ಟಿ20 ಪಂದ್ಯಕ್ಕೆ ಮಳೆ ಭೀತಿ
ಭೋಪಾಲ್ : ಭಾರತ ಹಾಗೂ ಬಾಂಗ್ಲಾದೇಶ ನಡುವೆ ಮುಂದಿನ ರವಿವಾರ ಗ್ವಾಲಿಯರ್‌ನಲ್ಲಿ ನಿಗದಿಯಾಗಿರುವ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ.
ಗ್ವಾಲಿಯರ್‌ನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಇದು ಆಯೋಜಕರು ಹಾಗೂ ಕ್ರಿಕೆಟ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ನಗರವು 14 ವರ್ಷಗಳಿಂದ ಯಾವುದೇ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಆತಿಥ್ಯವನ್ನು ವಹಿಸಿಲ್ಲ. ಹೀಗಾಗಿ ಈ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದಿದ್ದಾರೆ.
ತೇವಾಂಶಭರಿತ ವಾತಾವರಣವು ಬಹು ನಿರೀಕ್ಷಿತ ಪಂದ್ಯದ ತಯಾರಿಯ ಮೇಲೆ ಪರಿಣಾಮಬೀರಿದೆ. ನಿರಂತರ ಮಳೆಯು ಸಂಪೂರ್ಣ ಪಂದ್ಯ ನಡೆಯುವ ಸಾಧ್ಯತೆಯ ಕುರಿತು ಸಂಶಯವನ್ನು ಹುಟ್ಟು ಹಾಕಿದೆ. ಪಿಚ್ ಹಾಗೂ ಔಟ್‌ಫೀಲ್ಡ್ ಆಡಲು ಸೂಕ್ತವಾಗಿರುವಂತೆ ನೋಡಿಕೊಳ್ಳಲು ಮೈದಾನದ ಸಿಬ್ಬಂದಿ ಕಠಿಣ ಶ್ರಮಪಡುತ್ತಿದ್ದಾರೆ.
ಗ್ವಾಲಿಯರ್‌ನ ಕ್ರಿಕೆಟ್ ಅಭಿಮಾನಿಗಳು ನಗರಕ್ಕೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮರಳುವುದನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. 2010ರಲ್ಲಿ ಕೊನೆಯ ಬಾರಿ ಗ್ವಾಲಿಯರ್‌ನಲ್ಲಿ ಅಂತರ್‌ರಾಷ್ಟ್ರೀಯ ಪಂದ್ಯ ನಡೆದಿತ್ತು. ಆಗ ಸಚಿನ್ ತೆಂಡುಲ್ಕರ್ ದಕ್ಷಿಣ ಆಫ್ರಿಕಾದ ವಿರುದ್ಧ 200 ರನ್ ಗಳಿಸಿದ್ದರು.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮಳೆಯು ಮುಂದಿನ ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ. ಆಗಾಗ ಭಾರೀ ಮಳೆಯಾಗುವ ನಿರೀಕ್ಷೆ ಇದೆ.