ವಾಂಖೆಡೆ ಅಂಗಳದಲ್ಲಿ ಮುಂದುವರಿದ ಭಾರತದ ʼಸ್ಪಿನ್ ಜೋಡಿʼ | ಕಿವೀಸ್ 171/9
ಮುಂಬೈ : ಇಲ್ಲಿನ ವಾಂಖೆಡೆ ಸ್ಟೇಡಿಯಮ್ ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ 2ನೇ ಇನ್ನಿಂಗ್ಸ್ ನಲ್ಲಿ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಸ್ಪಿನ್ ಬೌಲಿಂಗ್ ಗೆ ತತ್ತರಿಸಿದ ನ್ಯೂಝಿಲ್ಯಾಂಡ್ ತಂಡವು 2ನೇ ಇನ್ನಿಂಗ್ಸ್ ನಲ್ಲಿ 43.3 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 171ರನ್ ಗಳಿಸಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡವು 263 ರನ್ ಗಳಿಸಿ ಆಲೌಟ್ ಆಯಿತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಝಿಲ್ಯಾಂಡ್ ತಂಡವು ಒಮ್ಮೆಲೇ ಕುಸಿತ ಕಂಡಿತು. ನ್ಯೂಝಿಲ್ಯಾಂಡ್ ಪರ ಟಾಮ್ ಲ್ಯಾಥಮ್, ಡೆವೋನ್ ಕಾನ್ವೆ ಇನ್ನಿಂಗ್ಸ್ ಆರಂಭಿಸಿದರು. ಭಾರತ ತಂಡದ ಅಕಾಶ್ ದೀಪ್ ಎಸೆದ ಮೊದಲ ಓವರ್ ನ 5 ನೇ ಎಸೆತದಲ್ಲಿ ನ್ಯೂಝಿಲ್ಯಾಂಡ್ ತಂಡದ ನಾಯಕ ಒಂದು ರನ್ ಗಳಿಸಿ, ಕ್ಲೀನ್ ಬೌಲ್ಡ್ ಆದರು.
ಮೊದಲ ಓವರ್ ನಲ್ಲೇ ಆಘಾತ ಎದುರಿಸಿದ ನ್ಯೂಝಿಲ್ಯಾಂಡ್ ಚೇತರಿಸಿಕೊಳ್ಳಲು ಪರದಾಡಿತು. ಡೆವೋನ್ ಕಾನ್ವೆಗೆ ಜೊತೆಯಾದ ವಿಲ್ ಯಂಗ್ ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ವಾಶಿಂಗ್ಟನ್ ಸುಂದರ್ ಎಸೆತದಲ್ಲಿ ಶುಭಮನ್ ಗಿಲ್ ಗೆ ಕ್ಯಾಚ್ ನೀಡಿ ಕಾನ್ವೆ ಪೆವಿಲಿಯನ್ ಹಾದಿ ಹಿಡಿದರು.
ನ್ಯೂಝಿಲ್ಯಾಂಡ್ ಪರ ವಿಲ್ ಯಂಗ್ 51 ರನ್ ಗಳಿಸಿದರು. 100 ಎಸೆತ ಎದುರಿಸಿದ ಅವರು ಎರಡು ಬೌಂಡರಿ ಸಹಿತ 1 ಸಿಕ್ಸರ್ ಬಾರಿಸಿ ತಂಡವನ್ನು ಕುಸಿತದಿಂದ ತಪ್ಪಿಸಿದರು. ರವಿಚಂದ್ರ ಅಶ್ವಿನ್ ಎಸೆತದಲ್ಲಿ ಕಾಟ್ ಆಂಡ್ ಬೌಲ್ಡ್ ಆದ ವಿಲ್ ಯಂಗ್ ಬಳಿಕ ಯಾರೂ ನ್ಯೂಝಿಲ್ಯಾಂಡ್ ಪರ ಹೆಚ್ಚಿನ ರನ್ ಗಳಿಸುವಲ್ಲಿ ವಿಫಲವಾದರು.
ನ್ಯೂಝಿಲ್ಯಾಂಡ್ ಪರ ಗ್ಲೆನ್ ಪಿಲಿಪ್ಸ್ 26, ಡೆರಿಲ್ ಮಿಚೆಲ್ 21, ಮ್ಯಾಟ್ ಹೆನ್ರಿ 10 ರನ್ ಗಳಿಸಿದರು. ರಚಿನ್ ರವೀಂದ್ರ ಕೇವಲ 4 ರನ್ ಗಳಿಸಿ ರವಿಚಂದ್ರ ಅಶ್ವಿನ್ ಎಸೆತದಲ್ಲಿ ರಿಷಬ್ ಪಂತ್ ಗೆ ಕ್ಯಾಚ್ ನೀಡಿ ಮತ್ತೆ ನಿರಾಸೆ ಮೂಡಿಸಿದರು.
ರವೀಂದ್ರ ಜಡೇಜಾ 4, ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದರೆ ವಾಷಿಂಗ್ಟನ್ ಸುಂದರ್ ಮತ್ತು ಆಕಾಶ್ ದೀಪ್ ತಲಾ ಒಂದು ವಿಕೆಟ್ ಪಡೆದರು. ನ್ಯೂಝಿಲ್ಯಾಂಡ್ ತಂಡವು ಭಾರತದ ವಿರುದ್ಧ 143 ರನ್‌ಗಳ ಲೀಡ್‌ನಲ್ಲಿದೆ.