ಭಾರತ ವಿರುದ್ಧ ಟ್ವೆಂಟಿ-20 ಸರಣಿ: ಕೊನೆಯ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯ ತಂಡದಲ್ಲಿ ಬದಲಾವಣೆ

Update: 2023-11-28 17:02 GMT

Photo- PTI

ಹೊಸದಿಲ್ಲಿ, ನ.28: ಭಾರತ ವಿರುದ್ಧ ಟ್ವೆಂಟಿ-20 ಸರಣಿಯನ್ನಾಡುತ್ತಿರುವ ಆಸ್ಟ್ರೇಲಿಯ ಟಿ-20 ತಂಡದಲ್ಲಿ ಆಯ್ಕೆಗಾರರು ಪ್ರಮುಖ ಬದಲಾವಣೆ ಮಾಡಿದ್ದಾರೆ. 5 ಪಂದ್ಯಗಳ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರೆ.

ಸರಣಿ ಮುಕ್ತಾಯಕ್ಕೆ ಮೊದಲು ಸ್ಟೀವ್ ಸ್ಮಿತ್ ಹಾಗೂ ಆಡಮ್ ಝಂಪಾ ಸಹಿತ ವಿಶ್ವಕಪ್ ವಿಜೇತ ತಂಡದ ಆರು ಆಟಗಾರರು ತಾಯ್ನಾಡಿಗೆ ವಾಪಸಾಗಲಿದ್ದಾರೆ.

ವಿಕೆಟ್‌ಕೀಪರ್-ಬ್ಯಾಟರ್ ಜೋಶ್ ಫಿಲಿಪ್ ಹಾಗೂ ಬಿಗ್ ಹಿಟ್ಟರ್ ಮೆಕ್ ಡೆರ್ಮಾಟ್ ಅವರು ತಂಡಕ್ಕೆ ಸೇರ್ಪಡೆಯಾಗಿದ್ದು, ಗುವಾಹಟಿಯಲ್ಲಿ 3ನೇ ಟಿ-20ಗೆ ಲಭ್ಯವಿದ್ದಾರೆ.

ಹೆಚ್ಚುವರಿಯಾಗಿ ಎನ್‌ಎಸ್‌ಡಬ್ಲ್ಯು ಆಟಗಾರರಾದ ಬೆನ್ ದ್ವಾರ್ಶುಯಿಸ್ ಹಾಗೂ ಸ್ಪಿನ್ನರ್ ಕ್ರಿಸ್ ಗ್ರೀನ್ ನಾಲ್ಕನೇ ಪಂದ್ಯಕ್ಕೆ ಮುಂಚಿತವಾಗಿ ರಾಯ್‌ಪುರದಲ್ಲಿ ತಂಡವನ್ನು ಸೇರಿಕೊಳ್ಳುತ್ತಾರೆ.

ಇತ್ತೀಚೆಗೆ ಸಿಡ್ನಿ ಥಂಡರ್ ತಂಡದ ಪೂರ್ಣಕಾಲಿಕ ನಾಯಕನಾಗಿ ನೇಮಕಗೊಂಡಿರುವ ಗ್ರೀನ್ ರಾಯ್‌ಪುರ ಇಲ್ಲವೇ ಬೆಂಗಳೂರಿನಲ್ಲಿ ನಡೆಯುವ ಪಂದ್ಯದಲ್ಲಿ ಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡಲಿದ್ದಾರೆ.

ಭಾರತದಲ್ಲಿ ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯರಾಗಿದ್ದ ಟ್ರಾವಿಸ್ ಹೆಡ್ ಸದ್ಯ ತಂಡದಲ್ಲಿ ಉಳಿದುಕೊಂಡಿದ್ದಾರೆ. ಮೀಸಲು ಆಟಗಾರನಾಗಿರುವ ತನ್ವೀರ್ ಸಾಂಘಾ ಕೂಡ ಹೆಡ್ ಜೊತೆಗಿದ್ದಾರೆ.

ಭಾರತದಲ್ಲಿ ಆಸ್ಟ್ರೇಲಿಯದ ಟ್ವೆಂಟಿ-20 ಅಭಿಯಾನವು ಮುಂದಿನ ವರ್ಷ ಅಮೆರಿಕ ಹಾಗೂ ಕೆರಿಬಿಯನ್ ನಾಡಿನಲ್ಲಿ ನಡೆಯುವ ಟಿ-20 ವಿಶ್ವಕಪ್‌ನ ಪೂರ್ವ ತಯಾರಿಯ ಭಾಗವಾಗಿದೆ. ಜಾಗತಿಕ ಟೂರ್ನಮೆಂಟ್‌ಗಿಂತ ಮೊದಲು 10 ಟಿ-20 ಇಂಟರ್‌ನ್ಯಾಶನಲ್ ಪಂದ್ಯಗಳು ನಿಗದಿಯಾಗಿವೆ.

ಆಸ್ಟ್ರೇಲಿಯಕ್ಕೆ ವಾಪಸಾಗಿರುವ ಆಟಗಾರರು: ಸ್ಟೀವನ್ ಸ್ಮಿತ್,ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಸೀನ್ ಅಬಾಟ್ ಹಾಗೂ ಆಡಮ್ ಝಂಪಾ.

ಆಸ್ಟ್ರೇಲಿಯ ಟ್ವೆಂಟಿ-20 ತಂಡ: ಮ್ಯಾಥ್ಯೂ ವೇಡ್(ನಾಯಕ),ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ಬೆನ್ ಡ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ರಿಸ್ ಗ್ರೀನ್, ಆ್ಯರೊನ್ ಹಾರ್ಡಿ, ಟ್ರಾವಿಸ್ ಹೆಡ್, ಬೆನ್ ಮೆಕ್‌ಡರ್ಮಾಟ್, ಜೋಶ್ ಫಿಲಿಪ್, ತನ್ವೀರ್ ಸಾಂಘಾ, ಮ್ಯಾಟ್ ಶಾರ್ಟ್, ಕೇನ್ ರಿಚರ್ಡ್‌ಸನ್.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News