ಇಂಗ್ಲೆಂಡ್ ವಿರುದ್ಧದ ಮೂರನೆ ಟೆಸ್ಟ್: ಭಾರತ ತಂಡದ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿದ್ದೇಕೆ?
ರಾಜ್‌ಕೋಟ್: ಇಂಗ್ಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಮೂರನೆಯ ಟೆಸ್ಟ್‌ನ ಮೂರನೆಯ ದಿನವಾದ ಇಂದು (ಶನಿವಾರ) ಭಾರತದ ಅತ್ಯಂತ ಹಿರಿಯ ಆಟಗಾರ ದತ್ತಾಜಿರಾವ್ ಗಾಯಕ್ವಾಡ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲು ಭಾರತೀಯ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದಾರೆ. ಭಾರತ ತಂಡದ ಪರವಾಗಿ 1951ರಿಂದ 1962ರ ನಡುವೆ ಒಟ್ಟು ಹನ್ನೊಂದು ಪಂದ್ಯಗಳನ್ನಾಡಿದ್ದ ದತ್ತಾಜಿರಾವ್ ಗಾಯಕ್ವಾಡ್ ಫೆಬ್ರವರಿ 11ರಂದು ಕೊನೆಯುಸಿರೆಳೆದಿದ್ದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಇನ್ನೂ ಜೀವಂತವಿದ್ದ ಭಾರತದ ಅತ್ಯಂತ ಹಿರಿಯ ಆಟಗಾರರಾಗಿದ್ದ ದತ್ತಾಜಿರಾವ್ ಗಾಯಕ್ವಾಡ್, ಭಾರತ ತಂಡದ ಮಾಜಿ ಬ್ಯಾಟರ್ ಹಾಗೂ ತರಬೇತುದಾರ ಅನ್ಷುಮನ್ ಗಾಯಕ್ವಾಡ್ ಅವರ ತಂದೆ.
ಮೂರನೆ ಟೆಸ್ಟ್‌ನ ಮೂರನೆ ದಿನದ ಆಟ ಪ್ರಾರಂಭಗೊಳ್ಳುವುದಕ್ಕೂ ಕೆಲವೇ ಹೊತ್ತಿನ ಮುಂಚೆ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು, "ಇತ್ತೀಚೆಗೆ ನಿಧನರಾದ ಭಾರತದ ಅತ್ಯಂತ ಹಿರಿಯ ಆಟಗಾರ ಹಾಗೂ ಭಾರತ ತಂಡದ ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ ಸ್ಮರಣಾರ್ಥ ಭಾರತ ತಂಡವು ತೋಳಿಗೆ ಕಪ್ಪು ಪಟ್ಟಿ ಧರಿಸಲಿದೆ" ಎಂದು ಹೇಳಿದೆ.
ಬಲಗೈ ಬ್ಯಾಟರ್ ಆಗಿದ್ದ ದತ್ತಾಜಿರಾವ್ ಗಾಯಕ್ವಾಡ್, ಮಧ್ಯಮ ವೇಗ ಹಾಗೂ ಲೆಗ್ ಬ್ರೇಕ್ ಬೌಲಿಂಗ್ ಕೂಡಾ ಮಾಡಬಲ್ಲವರಾಗಿದ್ದರು. ಅವರು 1959ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡದ ನಾಯಕರಾಗಿದ್ದರು.