ಒಂದೇ ಟೆಸ್ಟ್ ನಲ್ಲಿ ಮೂರು ವಿಶ್ವದಾಖಲೆ ಮುರಿದ ಭಾರತ ತಂಡ

Update: 2024-09-30 13:00 GMT

 ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ | PTI

ಕಾನ್ಪುರ : ಕಾನ್ಪುರದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ 4ನೇ ದಿನದಂದು ಬಾಂಗ್ಲಾದೇಶದ ವಿರುದ್ಧ ಬ್ಯಾಟಿಂಗ್‌ಗೆ ಇಳಿದ ಭಾರತದ ಆರಂಭಿಕ ಬ್ಯಾಟರ್ ಗಳಾದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶವನ್ನು 233 ರನ್‌ಗಳಿಗೆ ಆಲೌಟ್ ಮಾಡಿದ ನಂತರ, ರೋಹಿತ್ ಮತ್ತು ಜೈಸ್ವಾಲ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಬಾಂಗ್ಲಾದೇಶದ ಬೌಲರ್ಗಳನ್ನು ದಂಡಿಸಿದ ರೋಹಿತ್ ಮತ್ತು ಜೈಸ್ವಾಲ್ ಅವರು ಕೇವಲ ಮೂರು ಓವರ್‌ಗಳಲ್ಲಿ ಭಾರತ ತಂಡದ ಮೊತ್ತವನ್ನು 50 ರನ್‌ ದಾಟಿಸಿದರು.

ಇದಕ್ಕೂ ಮೊದಲು, ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 26 ಎಸೆತಗಳಲ್ಲಿ ವೇಗವಾಗಿ 50 ರನ್ ಗಳಿಸಿದ ದಾಖಲೆಯನ್ನು ಹೊಂದಿತ್ತು. ಆದರೆ ಭಾರತ ತಂಡವು ಕೇವಲ 18 ಎಸೆತಗಳಲ್ಲಿ ಅರ್ಧಶತಕವನ್ನು ತಲುಪುವ ಮೂಲಕ ಸಾಕಷ್ಟು ದೊಡ್ಡ ಅಂತರದಿಂದ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಯಿತು. ಈ ವರ್ಷದ ಆರಂಭದಲ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಈ ದಾಖಲೆ ನಿರ್ಮಿಸಿತ್ತು.

2008ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ವೇಗವಾಗಿ 50 ರನ್ ಬಾರಿಸಿತ್ತು. ಆ ಪಂದ್ಯದಲ್ಲಿ ಭಾರತ ತಂಡ 5.2 ಓವರ್‌ಗಳಲ್ಲಿ 50 ರನ್‌ಗಳ ಗಡಿಯನ್ನು ತಲುಪಿತ್ತು.

►ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ 50 ರನ್ ಗಳಿಸಿದ ತಂಡ:

3.0 ಓವರ್‌ಗಳು – ಭಾರತ (ಬಾಂಗ್ಲಾದೇಶದ ವಿರುದ್ಧ) , ಕಾನ್ಪುರ, 2024

4.2 ಓವರ್‌ಗಳು - ಇಂಗ್ಲೆಂಡ್ (ವೆಸ್ಟ್ ಇಂಡೀಸ್ ವಿರುದ್ಧ), ನಾಟಿಂಗ್‌ಹ್ಯಾಮ್, 2024

4.3 ಓವರ್‌ಗಳು - ಇಂಗ್ಲೆಂಡ್ (ದಕ್ಷಿಣ ಆಫ್ರಿಕಾದ ವಿರುದ್ಧ), ಓವಲ್, 1994

4.6 ಓವರ್‌ಗಳು - ಇಂಗ್ಲೆಂಡ್ (ಶ್ರೀಲಂಕಾದ ವಿರುದ್ಧ), ಮ್ಯಾಂಚೆಸ್ಟರ್, 2002

5.2 ಓವರ್‌ಗಳು - ಶ್ರೀಲಂಕಾ (ಪಾಕಿಸ್ತಾನದ ವಿರುದ್ಧ), ಕರಾಚಿ, 2004

5.3 ಓವರ್‌ಗಳು - ಭಾರತ (ಇಂಗ್ಲೆಂಡ್ ವಿರುದ್ಧ), ಚೆನ್ನೈ, 2008

5.3 ಓವರ್‌ಗಳು - ಭಾರತ (ವೆಸ್ಟ್ ಇಂಡೀಸ್ ವಿರುದ್ಧ), ಪೋರ್ಟ್ ಆಫ್ ಸ್ಪೇನ್, 2023

ಇದಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವು ವೇಗದ 100 ರನ್ ವಿಶ್ವ ದಾಖಲೆಯನ್ನು ಮುರಿಯಿತು. ಕೇವಲ 61 ಎಸೆತಗಳಲ್ಲಿ (10.1 ಓವರ್) ಭಾರತ ತಂಡವು ಮೂರಂಕಿಯ ಗಡಿ ತಲುಪಿತು. ಆ ಮೂಲಕ ತಮ್ಮದೇ ಆದ ದಾಖಲೆಯನ್ನು ಅಳಿಸಿಹಾಕಿತು. ಈ ಹಿಂದೆ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತವು 12.2 ಓವರ್‌ಗಳಲ್ಲಿ 100 ರನ್ ದಾಖಲಿಸಿತ್ತು.

►ಟೆಸ್ಟ್ ಇತಿಹಾಸದಲ್ಲಿ ವೇಗದ 100 ರನ್ ಗಳಿಸಿದ ತಂಡ:

10.1 ಓವರ್‌ಗಳು - ಭಾರತ (ಬಾಂಗ್ಲಾದೇಶದ ವಿರುದ್ಧ), ಕಾನ್ಪುರ 2024

12.2 ಓವರ್‌ಗಳು - ಭಾರತ (ವೆಸ್ಟ್ ಇಂಡೀಸ್ ವಿರುದ್ಧ), ಪೋರ್ಟ್ ಆಫ್ ಸ್ಪೇನ್ 2023

13.1 ಓವರ್‌ಗಳು - ಶ್ರೀಲಂಕಾ (ಬಾಂಗ್ಲಾದೇಶದ ವಿರುದ್ಧ), ಕೊಲಂಬೊ 2001

13.4 ಓವರ್‌ಗಳು – ಬಾಂಗ್ಲಾದೇಶ (ವೆಸ್ಟ್ ಇಂಡೀಸ್ ವಿರುದ್ಧ), ಮೀರ್‌ಪುರ್ 2012

13.4 ಓವರ್‌ಗಳು - ಇಂಗ್ಲೆಂಡ್ (ಪಾಕಿಸ್ತಾನ ವಿರುದ್ಧ), ಕರಾಚಿ 2022

13.4 ಓವರ್‌ಗಳು - ಇಂಗ್ಲೆಂಡ್ (ಪಾಕಿಸ್ತಾನ ವಿರುದ್ಧ), ರಾವಲ್ಪಿಂಡಿ 2022

13.6 ಓವರ್‌ಗಳು – ಆಸ್ಟ್ರೇಲಿಯಾ(ಭಾರತದ ವಿರುದ್ಧ), ಪರ್ತ್ 2012

ಇದಲ್ಲದೇ ಭಾರತ ತಂದವು 18.2 ಓವರ್‌ಗಳಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ 150 ರನ್ ಗಳಿಸಿದ ದಾಖಲೆ ಬರೆಯಿತು. 21.1 ಓವರ್‌ಗಳಲ್ಲಿ 150 ರನ್‌ಗಳ ಗಡಿಯನ್ನು ದಾಟಿದ ತನ್ನ ಹಿಂದಿನ ದಾಖಲೆಯನ್ನು ಭಾರತವು ಅಳಿಸಿ ಹಾಕಿತು. ಈ ಹಿಂದೆ 2023ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಈ ಸಾಧನೆ ಮಾಡಿತ್ತು.

ಇದಕ್ಕೂ ಮೊದಲು ಭಾರತ ಎರಡನೇ ಟೆಸ್ಟ್‌ನ ನಾಲ್ಕನೇ ದಿನದಂದು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶವನ್ನು 233 ರನ್‌ಗಳಿಗೆ ಆಲೌಟ್ ಮಾಡಿತು. ಮೊಮಿನುಲ್ ಹಕ್ ಅಜೇಯರಾಗಿ ಬಾಂಗ್ಲಾದೇಶ ಪರ 107 ರನ್ ಗಳಿಸಿದರು. ಬಾಂಗ್ಲಾದೇಶ 74.2 ಓವರ್‌ಗಳಲ್ಲಿ 233 ರನ್ ಗಳಿಸಿತು.

ಭಾರತದ ಪರ ಜಸ್ಪ್ರೀತ್ ಬುಮ್ರಾ (3/50) ಮೂರು ವಿಕೆಟ್ ಪಡೆದರೆ, ಆಕಾಶ್ ದೀಪ್ (2/43), ರವಿಚಂದ್ರನ್ ಅಶ್ವಿನ್ (2/45) ಮತ್ತು ಮುಹಮ್ಮದ್ ಸಿರಾಜ್ (2/57) ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಭಾರತವು 289 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News