ದ್ವಿತೀಯ ಟೆಸ್ಟ್: ಭಾರತದ ಅಬ್ಬರದ ಬ್ಯಾಟಿಂಗ್, ಹಲವು ದಾಖಲೆಗಳು ಪತನ

Update: 2024-09-30 14:03 GMT

ಯಶಸ್ವಿ ಜೈಸ್ವಾಲ್ |  PC : PTI

ಕಾನ್ಪುರ : ಮಿಂಚಿನ ವೇಗದಲ್ಲಿ ಬ್ಯಾಟಿಂಗ್ ಪ್ರದರ್ಶಿಸಿ ಬಾಂಗ್ಲಾದೇಶದ ಮೊದಲ ಇನಿಂಗ್ಸ್ ಮೊತ್ತವನ್ನು(233 ರನ್) ಕೇವಲ 28 ಓವರ್‌ಗಳಲ್ಲಿ ಹಿಂದಿಕ್ಕಿದ ಟೀಮ್ ಇಂಡಿಯಾವು ಹಲವು ದಾಖಲೆಗಳನ್ನು ಪುಡಿಗಟ್ಟಿದ್ದು, ಮಳೆ ಬಾಧಿತ ಎರಡನೇ ಟೆಸ್ಟ್ ಪಂದ್ಯಕ್ಕೆ ಹೊಸ ಜೀವ ನೀಡಿದೆ.

ನಾಲ್ಕನೇ ದಿನವಾದ ಸೋಮವಾರ ರೋಹಿತ್ ಶರ್ಮಾ ಬಳಗವು ಬಾಂಗ್ಲಾದೇಶವನ್ನು ಮೊದಲ ಇನಿಂಗ್ಸ್‌ನಲ್ಲಿ 233 ರನ್‌ಗೆ ಆಲೌಟ್ ಮಾಡಿತು. ಗ್ರೀನ್‌ಪಾರ್ಕ್ ಕ್ರೀಡಾಂಗಣದಲ್ಲಿ ಅತ್ಯಂತ ವೇಗದಲ್ಲಿ ರನ್ ಕಲೆ ಹಾಕಿ ವಿಶ್ವ ದಾಖಲೆ ನಿರ್ಮಿಸಿತು.

ಭಾರತವು 3 ಓವರ್‌ಗಳಲ್ಲಿ 50 ರನ್, 10.1 ಓವರ್‌ಗಳಲ್ಲಿ 100 ರನ್ ಹಾಗೂ 24.2 ಓವರ್‌ಗಳಲ್ಲಿ 200 ರನ್ ಪೂರೈಸಿತು. ವೇಗವಾಗಿ ರನ್ ಗಳಿಸಿದ ಟೆಸ್ಟ್ ತಂಡ ಎನಿಸಿಕೊಂಡಿತು. ಪ್ರತಿಕೂಲ ಹವಾಮಾನದಿಂದಾಗಿ ಎರಡು ದಿನದಾಟಗಳು ವ್ಯರ್ಥವಾದ ಹಿನ್ನೆಲೆಯಲ್ಲಿ ಭಾರತವು ಈ ಪಂದ್ಯದಲ್ಲಿ ಫಲಿತಾಂಶ ಪಡೆಯಲು ಶತ ಪ್ರಯತ್ನ ನಡೆಸುತ್ತಿದೆ.

ಆತಿಥೇಯ ಭಾರತವು 9 ವಿಕೆಟ್‌ಗಳ ನಷ್ಟಕ್ಕೆ 285 ರನ್ ಗಳಿಸಿ ತನ್ನ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿತು. 52 ರನ್ ಅಲ್ಪ ಮುನ್ನಡೆ ಪಡೆದಿರುವ ರೋಹಿತ್ ಬಳಗವು ಎರಡನೇ ಇನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶದ 2 ವಿಕೆಟ್‌ಗಳನ್ನು ಉರುಳಿಸಿದೆ.

ಆರ್. ಅಶ್ವಿನ್ ಅವರು ಸತತ ಓವರ್‌ಗಳಲಿ ಝಾಕಿರ್ ಹಸನ್(10 ರನ್) ಹಾಗೂ ಹಸನ್ ಮಹ್ಮೂದ್(4 ರನ್)ವಿಕೆಟ್‌ಗಳನ್ನು ಪಡೆದಿದ್ದು, ಬಾಂಗ್ಲಾವು ದಿನದಾಟದಂತ್ಯಕ್ಕೆ 26 ರನ್‌ಗೆ 2 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಶಾದ್‌ಮಾನ್ ಇಸ್ಲಾಮ್(7 ರನ್)ಹಾಗೂ ಮೂಮಿನುಲ್ ಹಕ್(0)ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು 3 ವಿಕೆಟ್‌ಗಳ ನಷ್ಟಕ್ಕೆ 107 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲಾದೇಶ ತಂಡದ ಪರ ಮೂಮಿನುಲ್ ಹಕ್ ಔಟಾಗದೆ 107 ರನ್ ಗಳಿಸಿದರೂ ಬಾಂಗ್ಲಾದೇಶದ ಇನ್ನುಳಿದ ಆಟಗಾರರು ಬೇಗನೆ ವಿಕೆಟ್ ಕೈಚೆಲ್ಲಿದರು.

ನಾಯಕ ರೋಹಿತ್ ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಲಿಟನ್ ದಾಸ್‌ಗೆ(13ರನ್)ಪೆವಿಲಿಯನ್ ಹಾದಿ ತೋರಿಸಿದರು. ಬೌಲರ್ ಮುಹಮ್ಮದ್ ಸಿರಾಜ್ ಕೂಡ ಒಂದೇ ಕೈಯಲ್ಲಿ ಆಕರ್ಷಕ ಕ್ಯಾಚ್ ಪಡೆದು ಶಾಕಿಬ್ ಅಲ್ ಹಸನ್‌ರನ್ನು ಔಟ್ ಮಾಡಿದರು.

13ನೇ ಟೆಸ್ಟ್ ಶತಕವನ್ನು ಸಿಡಿಸಿದ ಮೂಮಿನುಲ್ ಹಕ್‌ರ 194 ಎಸೆತಗಳ ಇನಿಂಗ್ಸ್‌ನಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸರ್ ಇದ್ದವು.

ಭಾರತದ ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ(3-50) ಯಶಸ್ವಿ ಪ್ರದರ್ಶನ ನೀಡಿದರು. ಆಕಾಶ್ ದೀಪ್(2-43), ಆರ್.ಅಶ್ವಿನ್(2-45) ಹಾಗೂ ಮುಹಮ್ಮದ್ ಸಿರಾಜ್(2-57)ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಭಾರತವು ತನ್ನ ಮೊದಲ ಇನಿಂಗ್ಸ್ ಆರಂಭಿಸಿದಾಗ ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಯಾದವು.

ಯಶಸ್ವಿ ಜೈಸ್ವಾಲ್(72 ರನ್, 51 ಎಸೆತ, 12 ಬೌಂಡರಿ, 2 ಸಿಕ್ಸರ್)ಮೊದಲ ಓವರ್‌ನಲ್ಲಿ ಹಸನ್ ಮಹ್ಮೂದ್ ಬೌಲಿಂಗ್‌ನಲ್ಲಿ ಸತತ 3 ಬೌಂಡರಿಗಳನ್ನು ಸಿಡಿಸಿ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದರು. ಮತ್ತೊಂದೆಡೆ ರೋಹಿತ್(23 ರನ್)ತಾನೆದುರಿಸಿದ ಮೊದಲ 5 ಎಸೆತಗಳಲ್ಲಿ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು.

ಸ್ಪಿನ್ನರ್ ಮೆಹದಿ ಹಸನ್ ಮಿರಾಝ್ ಅವರು ರೋಹಿತ್ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು. ಆದರೆ ಶುಭಮನ್ ಗಿಲ್(39 ರನ್,36 ಎಸೆತ)ಅವರೊಂದಿಗೆ ಸೇರಿಕೊಂಡ ಜೈಸ್ವಾಲ್ 2ನೇ ವಿಕೆಟ್‌ನಲ್ಲಿ 63 ಎಸೆತಗಳಲ್ಲಿ 72 ರನ್ ಸೇರಿಸಿದರು. 31 ಎಸೆತಗಳಲ್ಲಿ ತನ್ನ ಅರ್ಧಶತಕ ಪೂರೈಸಿದರು.

ಜೈಸ್ವಾಲ್, ಗಿಲ್ ಹಾಗೂ ರಿಷಭ್ ಪಂತ್(9) ಬೆನ್ನುಬೆನ್ನಿಗೆ ಔಟಾದರು. ಆಗ ಕೆ.ಎಲ್.ರಾಹುಲ್(68 ರನ್, 43 ಎಸೆತ)ಹಾಗೂ ವಿರಾಟ್ ಕೊಹ್ಲಿ(47 ರನ್, 35 ಎಸೆತ)5ನೇ ವಿಕೆಟ್‌ಗೆ 59 ಎಸೆತಗಳಲ್ಲಿ 87 ರನ್ ಜೊತೆಯಾಟ ನಡೆಸಿ ಇನಿಂಗ್ಸ್‌ಗೆ ಬಲ ತುಂಬಿದರು. ರೋಹಿತ್ ಇನಿಂಗ್ಸ್ ಡಿಕ್ಲೇರ್ ಮಾಡುವ ಮೊದಲು ಬಾಲಂಗೋಚಿ ಆಕಾಶ್ ದೀಪ್ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು.

ಬಾಂಗ್ಲಾದೇಶದ ಪರ ಮೆಹದಿ ಹಸನ್(4-41)ಹಾಗೂ ಶಾಕಿಬ್ ಅಲ್ ಹಸನ್ (4-78)ತಲಾ ನಾಲ್ಕು ವಿಕೆಟ್‌ಗಳನ್ನು ಪಡೆದರು.

ಮಳೆ ಹಾಗೂ ತೇವಾಂಶದಿಂದ ಕೂಡಿದ್ದ ಕ್ರೀಡಾಂಗಣದಿಂದಾಗಿ ಸತತ ಎರಡು ದಿನದಾಟವು ಒಂದೂ ಎಸೆತ ಕಾಣದೆ ರದ್ದಾಗಿದ್ದ ಕಾನ್ಪುರದ ಕ್ರೀಡಾಂಗಣದಲ್ಲಿ ಸೋಮವಾರ ಅಸಾಧಾರಣ ಕ್ರಿಕೆಟ್ ಪ್ರದರ್ಶನಗೊಂಡಿತು. ದಿನದಾಟದಲ್ಲಿ 85 ಓವರ್‌ಗಳು ಎಸೆಯಲ್ಪಟ್ಟಿದ್ದು, ಒಟ್ಟು 437 ರನ್ ದಾಖಲಾಗಿದ್ದವು. 18 ವಿಕೆಟ್‌ಗಳು ಪತನಗೊಂಡವು. ಇದರಿಂದಾಗಿ ನೆರೆದಿದ್ದ ಪ್ರೇಕ್ಷಕರಿಗೆ ಭಾರೀ ಮನರಂಜನೆ ಲಭಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News