ಶ್ರೀಲಂಕಾದ ಮುಖ್ಯ ಕೋಚ್ ಆಗಿ ಸನತ್ ಜಯಸೂರ್ಯ ಮುಂದುವರಿಕೆ?

Update: 2024-09-29 15:39 GMT

 ಸನತ್ ಜಯಸೂರ್ಯ | PC : PTI 

ಕೊಲಂಬೊ : ಶ್ರೀಲಂಕಾ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸನತ್ ಜಯಸೂರ್ಯ ಅವರ ಒಪ್ಪಂದ ಇನ್ನೂ ಒಂದು ವರ್ಷ ವಿಸ್ತರಣೆಯಾಗುವ ಸಾಧ್ಯತೆಯಿದೆ. ಜಯಸೂರ್ಯ ಕೋಚ್ ಆಗಿ ನೇಮಕಗೊಂಡ ನಂತರ ಶ್ರೀಲಂಕಾ ಕ್ರಿಕೆಟ್ ತಂಡವು ಹಲವು ಮಹತ್ವದ ಗೆಲುವು ದಾಖಲಿಸಿದೆ.

ಜುಲೈ ಆರಂಭದಲ್ಲಿ ಜಯಸೂರ್ಯ ಮುಖ್ಯ ಕೋಚ್ ಆಗಿ ಅಧಿಕಾರವಹಿಸಿಕೊಂಡ ನಂತರ ಶ್ರೀಲಂಕಾ ತಂಡ ಭಾರತ ವಿರುದ್ಧದ ಏಕದಿನ ಸರಣಿಯನ್ನು ಜಯಿಸಿತ್ತು. ದಿ ಓವಲ್‌ನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತ್ತು. ಇದೀಗ ಗಾಲೆಯಲ್ಲಿ ನ್ಯೂಝಿಲ್ಯಾಂಡ್ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ.

ಕ್ರಿಸ್ ಸಿಲ್ವರ್‌ವುಡ್ ಜೂನ್ ಅಂತ್ಯಕ್ಕೆ ರಾಜೀನಾಮೆ ನೀಡಿದ ನಂತರ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಖಾಯಂ ಮುಖ್ಯ ಕೋಚ್‌ಗಾಗಿ ಜಾಹೀರಾತನ್ನು ನೀಡಿತ್ತು. ಆದರೆ ಜಯಸೂರ್ಯ ನಾಯಕತ್ವದಲ್ಲಿ ಶ್ರೀಲಂಕಾ ಗಮನಾರ್ಹ ಸುಧಾರಣೆ ಕಂಡಿರುವ ಕಾರಣ ಕ್ರಿಕೆಟ್ ಮಂಡಳಿಯು ಜಯಸೂರ್ಯ ಅವರನ್ನೇ ಸುದೀರ್ಘ ಅವಧಿಗೆ ಕೋಚ್ ಆಗಿ ಮುಂದುವರಿಸುವತ್ತ ಹೆಜ್ಜೆ ಇಟ್ಟಿದೆ.

ನಾವು ಜಯಸೂರ್ಯ ಅವರೊಂದಿಗೆ ಒಪ್ಪಂದದ ಮಾತುಕತೆಯ ಅಂತಿಮ ಹಂತದಲ್ಲಿದ್ದೇವೆ. ಬಹುಶಃ ಇನ್ನು ಎರಡು-ಮೂರು ದಿನಗಳಲ್ಲಿ ಇನ್ನಷ್ಟು ವಿಚಾರವನ್ನು ಕೇಳುತ್ತೀರಿ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಸಿಇಒ ಅಶ್ಲೆ ಡಿ ಸಿಲ್ವ ಅವರು ಇಎಸ್‌ಪಿಎನ್‌ಕ್ರಿಕ್‌ಇನ್‌ಫೋಗೆ ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕ್ರಿಕೆಟ್ ಸಲಹೆಗಾರನಾಗಿ ನೇಮಕವಾಗಿದ್ದ ಜಯಸೂರ್ಯ ಅವರು ಹೈ ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಕೆಲಸ ಮಾಡುವತ್ತ ಗಮನ ಹರಿಸಿದ್ದರು. ಟಿ-20 ವಿಶ್ವಕಪ್‌ಗಾಗಿ ರಾಷ್ಟ್ರೀಯ ತಂಡದೊಂದಿಗೆ ತೆರಳಿದ ನಂತರ ತಂಡದೊಂದಿಗೆ ಅವರ ನಂಟು ಹೆಚ್ಚಳವಾಗಿತ್ತು. ಆ ನಂತರ ಅವರು ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕಗೊಂಡರು.

ಭಾರತ ವಿರುದ್ಧ ಟಿ20 ಸರಣಿ ಸೋಲು ಹಾಗೂ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸೋಲಿನ ಹೊರತಾಗಿಯೂ ಜಯಸೂರ್ಯ ಅವಧಿಯಲ್ಲಿ ಶ್ರೀಲಂಕಾ ತಂಡ ಹಿನ್ನಡೆಗಿಂತ ಯಶಸ್ಸನ್ನೇ ಹೆಚ್ಚು ಗಳಿಸಿದೆ.

ಜಯಸೂರ್ಯ ಮಾರ್ಗದರ್ಶನದಲ್ಲಿ ಶ್ರೀಲಂಕಾ ತಂಡ ಈಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News