ಭಾರತ-ಬಾಂಗ್ಲಾದೇಶ ಎರಡನೇ ಟೆಸ್ಟ್ | ಒಂದೇ ಒಂದು ಎಸೆತ ಕಾಣದೆ ಮೂರನೇ ದಿನದಾಟವೂ ರದ್ದು
ಕಾನ್ಪುರ : ಉತ್ತರಪ್ರದೇಶದ ಕಾನ್ಪುರ ನಗರದಲ್ಲಿ ರವಿವಾರ ಮಳೆ ಸುರಿಯದೇ ಇದ್ದರೂ ಗ್ರೀನ್ ಪಾರ್ಕ್ ಕ್ರೀಡಾಂಗಣ ತೇವಗೊಂಡಿರುವ ಕಾರಣ ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್‌ನ ಮೂರನೇ ದಿನದಾಟ ಕೂಡ ಒಂದೇ ಒಂದು ಎಸೆತ ಕಾಣದೆ ರದ್ದುಗೊಂಡಿದೆ. ಇದರೊಂದಿಗೆ ಸತತ ಎರಡನೇ ದಿನದಾಟವೂ ಮಳೆಗಾಹುತಿಯಾಗಿದೆ.
ತಡರಾತ್ರಿ ಮಳೆ ಸುರಿದಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ಸರಿಯಾದ ಸಮಯಕ್ಕೆ ಪಂದ್ಯ ಆರಂಭಿಸಲು ಸಾಧ್ಯವಾಗಲಿಲ್ಲ. ಒದ್ದೆಯಾದ ಹೊರಾಂಗಣದಿಂದಾಗಿ ಉಭಯ ತಂಡಗಳು ಹಾಗೂ ಅಭಿಮಾನಿಗಳು ಕಾಯಬೇಕಾಯಿತು. ಹಲವು ಬಾರಿ ಪಿಚ್ ಹಾಗೂ ಮೈದಾನ ಪರಿಶೀಲಿಸಿದ ಅಂಪೈರ್‌ಗಳು ಕೊನೆಗೆ ಮೈದಾನ ಆಡಲು ಯೋಗ್ಯವಲ್ಲದ ಕಾರಣಕ್ಕೆ ದಿನದಾಟ ರದ್ದುಗೊಳಿಸಲು ನಿರ್ಧರಿಸಿದರು.
ಅಂಪೈರ್‌ಗಳಾದ ಕ್ರಿಸ್ ಬ್ರೌನ್(ನ್ಯೂಝಿಲ್ಯಾಂಡ್)ಹಾಗೂ ರಿಚರ್ಡ್ ಕೆಟ್ಟೆಲ್‌ಬೊರಫ್(ಇಂಗ್ಲೆಂಡ್)ಸ್ಥಳೀಯ ಸಮಯ ಬೆಳಗ್ಗೆ 10 ಗಂಟೆಗೆ ಪಿಚ್ ಪರಿಶೀಲಿಸಿದರು. ಎರಡು ಗಂಟೆಯ ನಂತರ ಮತ್ತೊಮ್ಮೆ ಪಿಚ್ ಪರಿಶೀಲಿಸಿದ ಅಂಪೈರ್‌ಗಳು ಪಂದ್ಯವನ್ನು ರದ್ದುಪಡಿಸಲು ನಿರ್ಧರಿಸಿದರು.
ಮಳೆಬಾಧಿತ ಮೊದಲ ದಿನದಾಟವಾದ ಶುಕ್ರವಾರ ಕೇವಲ 35 ಓವರ್‌ಗಳ ಪಂದ್ಯ ಆಡಲಷ್ಟೇ ಸಾಧ್ಯವಾಗಿದ್ದು, ಬಾಂಗ್ಲಾದೇಶ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 107 ರನ್ ಗಳಿಸಿದೆ.ಆಕಾಶ್ ದೀಪ್ ಬೌಲಿಂಗ್‌ನಿಂದ ಆರಂಭಿಕ ಕುಸಿತಕ್ಕೆ ಒಳಗಾಗಿದ್ದ ಬಾಂಗ್ಲಾದೇಶ ಚೇತರಿಕೆ ಕಂಡಿತ್ತು.
ಮಳೆ ಹಾಗೂ ಮೈದಾನ ತೇವಾಂಶದಿಂದ ಕೂಡಿದ್ದ ಕಾರಣ ಶನಿವಾರ ಎರಡನೇ ದಿನದಾಟವೂ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು.
ಸತತ 2 ದಿನ ಮಳೆಯದ್ದೇ ಆಟ ನಡೆದಿರುವ ಕಾರಣ ಇನ್ನೆರಡು ದಿನಗಳು ಬಾಕಿ ಉಳಿದಿರುವಂತೆಯೇ ಫಲಿತಾಂಶ ದಾಖಲಿಸಲು ಸಾಧ್ಯವೇ ಎಂಬ ಅನುಮಾನ ಮೂಡಿದೆ. ಈ ಪಂದ್ಯವು ಡ್ರಾನಲ್ಲಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಶುಕ್ರವಾರ ಟಾಸ್ ಜಯಿಸಿದ ಭಾರತವು ಸ್ವದೇಶದಲ್ಲಿ ನಡೆದಿರುವ ಟೆಸ್ಟ್ ಪಂದ್ಯದಲ್ಲಿ 2015ರ ನಂತರ ಮೊದಲ ಬಾರಿ ಫೀಲ್ಡಿಂಗ್ ಆಯ್ದುಕೊಂಡಿತು. ಭಾರತವು ಚೆನ್ನೈನಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯವನ್ನು 280 ರನ್ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡು 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.