ಐಪಿಎಲ್ | 2027ರವರೆಗೆ ಆರ್‌ಸಿಬಿ ತಂಡದೊಂದಿಗೇ ಉಳಿಯುವ ಸುಳಿವು ನೀಡಿದ ವಿರಾಟ್ ಕೊಹ್ಲಿ
ಬೆಂಗಳೂರು: ಐಪಿಎಲ್ ಕ್ರೀಡಾಕೂಟದಲ್ಲಿ ಆರ್‌ಸಿಬಿ ತಂಡದ ಪರವಾಗಿ ಆಡುತ್ತಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿಶಿಷ್ಟ ದಾಖಲೆಯೊಂದನ್ನು ಬರೆಯುವ ಸುಳಿವು ನೀಡಿದ್ದಾರೆ. ಆರ್‌ಸಿಬಿ ತಂಡದ ಪರ 2027ರವರೆಗೂ ಆಡಿ, ನಂತರ ಐಪಿಎಲ್ ಕ್ರೀಡಾಕೂಟಕ್ಕೆ ವಿದಾಯ ಹೇಳುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಕ್ರೀಡಾಕೂಟ 2008ರಿಂದ ಪ್ರಾರಂಭಗೊಂಡಾಗಿನಿಂದಲೂ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದೊಂದಿಗೇ ಗುರುತಿಸಿಕೊಂಡಿದ್ದಾರೆ. 36 ವರ್ಷದ ಬಲಗೈ ಬ್ಯಾಟರ್ ಆದ ವಿರಾಟ್ ಕೊಹ್ಲಿ ಇನ್ನೂ ಎಷ್ಟು ವರ್ಷಗಳ ಕಾಲ ಐಪಿಎಲ್ ಕ್ರೀಡಾಕೂಟದಲ್ಲಿ ಮುಂದುವರಿಯಲಿದ್ದಾರೆ ಎಂಬ ಕುರಿತು ವದಂತಿಗಳು ಹರಡಿರುವ ಹೊತ್ತಿನಲ್ಲೇ ಅವರು 2027ರವರೆಗೆ ಆರ್‌ಸಿಬಿ ತಂಡದಲ್ಲೇ ಮುಂದುವರಿದು, ಆ ತಂಡದೊಂದಿಗಿನ ತಮ್ಮ 20 ವರ್ಷಗಳ ಪಯಣವನ್ನು ಮುಕ್ತಾಯಗೊಳಿಸುವ ಸುಳಿವು ನೀಡಿದ್ದಾರೆ.
ಐಪಿಎಲ್ ಕ್ರೀಡಾಕೂಟದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನೆಂಬ ಹಿರಿಮೆ ಹೊಂದಿರುವ ವಿರಾಟ್ ಕೊಹ್ಲಿ, 131.97 ರನ್ ಸರಾಸರಿಯಲ್ಲಿ 8,000ಕ್ಕಿಂತ ಹೆಚ್ಚು ರನ್ ಗಳನ್ನು ಕಲೆ ಹಾಕಿದ್ದಾರೆ. ಈ ರನ್ ಗಳ ಮೊತ್ತದಲ್ಲಿ ಎಂಟು ಶತಕಗಳು ಹಾಗೂ 55 ಅರ್ಧ ಶತಕಗಳು ಸೇರಿವೆ.
ಈ ಬಾರಿಯ ಐಪಿಎಲ್ ಋತುವಿನಲ್ಲಿ ವಿರಾಟ್ ಕೊಹ್ಲಿಯನ್ನು ತಂಡದಲ್ಲೇ ಉಳಿಸಿಕೊಂಡಿರುವ ಆರ್‌ಸಿಬಿ ಫ್ರಾಂಚೈಸಿ, ಅದಕ್ಕಾಗಿ ಅವರಿಗೆ ರೂ. 21 ಕೋಟಿ ಬೃಹತ್ ಸಂಭಾವನೆ ನೀಡಿದೆ.
ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ವಿರಾಟ್ ಕೊಹ್ಲಿ, “ನನ್ನ ವೃತ್ತಿ ಜೀವನದ ಕೊನೆಗೆ 20 ವರ್ಷಗಳು ಪೂರ್ಣಗೊಳ್ಳಲಿವೆ ಹಾಗೂ ಆ 20 ವರ್ಷಗಳನ್ನು ನಾನು ಆರ್‌ಸಿಬಿಯ ಪರವಾಗಿಯೇ ಆಡಲಿದ್ದೇನೆ. ಇದು ನನ್ನ ಪಾಲಿಗೆ ಬಹಳ, ಬಹಳ ವಿಶೇಷ ಅನುಭವವಾಗಿದೆ” ಎಂದು “RCB Bold Diaries”ನಲ್ಲಿ ಹೇಳಿಕೊಂಡಿದ್ದಾರೆ. ಆ ಮೂಲಕ ಆರ್‌ಸಿಬಿ ತಂಡದ ಪರವಾಗಿ 2027ರವರೆಗೆ ಆಡುವ ಸೂಚನೆ ನೀಡಿದ್ದಾರೆ.
“ನಾನು ಒಂದು ತಂಡದ ಪರವಾಗಿ ಇಷ್ಟು ದೀರ್ಘಕಾಲ ಆಡುತ್ತೇನೆ ಎಂದುಕೊಂಡಿರಲಿಲ್ಲ. ಆದರೆ, ಹಲವಾರು ವರ್ಷಗಳಿಂದ ಈ ಸಂಬಂಧವು ನಿಜವಾಗಿಯೂ ವಿಶೇಷವಾಗಿದೆ” ಎಂದೂ ಹರ್ಷ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಾನು ಬೇರೆ ಫ್ರಾಂಚೈಸಿಗೆ ಆಡಲಾರೆ ಎಂದೂ ಅವರು ಪುನರುಚ್ಚರಿಸಿದ್ದಾರೆ. ಇದೇ ಅವಧಿಯಲ್ಲಿ ಆರ್‌ಸಿಬಿಗೆ ಚೊಚ್ಚಲ ಐಪಿಎಲ್ ಕಪ್ ಗೆಲ್ಲುವ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ.
ಈ ನಡುವೆ, ವಿರಾಟ್ ಕೊಹ್ಲಿಯೊಂದಿಗೆ ರಜತ್ ಪಾಟೀದಾರ್ (ರೂ. 11 ಕೋಟಿ) ಹಾಗೂ ಯಶ್ ದಯಾಳ್ (ರೂ. 5 ಕೋಟಿ) ಅನ್ನೂ ಆರ್‌ಸಿಬಿ ತಂಡ ಉಳಿಸಿಕೊಂಡಿದೆ. ಇದೇ ವೇಳೆ ಗ್ಲೆನ್ ಮ್ಯಾಕ್ಸ್ ವೆಲ್, ಮುಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್ ಹಾಗೂ ಕ್ಯಾಮೆರೂನ್ ಗ್ರೀನ್ ಆರ್‌ಸಿಬಿ ತಂಡದಿಂದ ಹೊರ ಹೋಗಲಿದ್ದಾರೆ ಎಂದು ವರದಿಯಾಗಿದೆ.