ಐಪಿಎಲ್‌ನಲ್ಲಿ ಆಡುವ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಪ್ರಕಟಿಸಿದ ಬಿಸಿಸಿಐ
ಹೊಸದಿಲ್ಲಿ : ಐಪಿಎಲ್‌ನಲ್ಲಿ ಆಡುವ ಕ್ರಿಕೆಟಿಗರಿಗೆ ಪಂದ್ಯ ಶುಲ್ಕವನ್ನು ಪ್ರಕಟಿಸಿರುವ ಬಿಸಿಸಿಐ ಶನಿವಾರ ಐತಿಹಾಸಿಕ ಹೆಜ್ಜೆಯೊಂದನ್ನು ಇಟ್ಟಿದೆ.
ಲಾಭದಾಯಕ ಒಪ್ಪಂದದ ಜೊತೆಗೆ ಆಟಗಾರನು ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ. ಪಂದ್ಯಶುಲ್ಕವನ್ನು ಪಡೆಯುತ್ತಾನೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶನಿವಾರ ತನ್ನ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದರು.
ಐಪಿಎಲ್‌ನಲ್ಲಿ ಸ್ಥಿರತೆ ಹಾಗೂ ಅತ್ಯುತ್ತಮ ಪ್ರದರ್ಶನವನ್ನು ಗುರುತಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶಾ ಹೇಳಿದ್ದಾರೆ.
ಆಟಗಾರನು ಒಂದು ಐಪಿಎಲ್ ಋತುವಿನಲ್ಲಿ ಎಲ್ಲ ಪಂದ್ಯಗಳನ್ನು ಆಡಿದರೆ ತನ್ನ ಒಪ್ಪಂದದ ಮೊತ್ತದೊಂದಿಗೆ 1.05 ಕೋ.ರೂ. ಹೆಚ್ಚ್ಚುವರಿ ಮೊತ್ತ ಗಳಿಸುತ್ತಾನೆ. ಪ್ರತಿ ಫ್ರಾಂಚೈಸಿಯು ಪ್ರತಿ ಋತುವಿಗೆ ಪಂದ್ಯಶುಲ್ಕಕ್ಕಾಗಿ 12.60 ಕೋ.ರೂ. ನಿಗದಿಪಡಿಸಲಿದೆ ಎಂದರು.
ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ 10 ಐಪಿಎಲ್ ತಂಡಗಳು ಐದು ಆಟಗಾರರನ್ನು ಉಳಿಸಿಕೊಳ್ಳುವ ಜೊತೆಗೆ ಒನ್ ರೈಟ್-ಟು-ಮ್ಯಾಚ್ ಕಾರ್ಡ್ ಬಳಸಬಹುದು.