ಒಲಿಂಪಿಕ್ಸ್‌ನಲ್ಲಿ ಅಶಿಸ್ತಿನ ವರ್ತನೆ ತೋರಿದ್ದ ಭಾರತದ ಕುಸ್ತಿಪಟು ಅಂತಿಮ್ ಪಾಂಘಾಲ್ ಸ್ವದೇಶಕ್ಕೆ

Update: 2024-08-09 16:12 GMT

ಅಂತಿಮ್ ಪಾಂಘಾಲ್ | PTI

ಹೊಸದಿಲ್ಲಿ : ಪ್ಯಾರಿಸ್‌ನಲ್ಲಿ ಒಲಿಂಪಿಕ್ ಗೇಮ್ಸ್ ವೇಳೆ ಕ್ರೀಡಾಗ್ರಾಮದಲ್ಲಿ ಅಶಿಸ್ತಿನ ವರ್ತನೆ ತೋರಿದ್ದ ಭಾರತದ ಕುಸ್ತಿಪಟು ಅಂತಿಮ್ ಪಾಂಘಾಲ್ ಶುಕ್ರವಾರ ಸ್ವದೇಶಕ್ಕೆ ವಾಪಸಾಗಿದ್ದಾರೆ.

ತನ್ನ ಸಹೋದರಿಗೆ ಕ್ರೀಡಾಗ್ರಾಮದೊಳಗೆ ಪ್ರವೇಶಿಸಲು ತನ್ನ ಮಾನ್ಯತಾ ಪತ್ರವನ್ನು ನೀಡಿ, ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ ಅಂತಿಮ್ ಪಾಂಘಾಲ್ ಬುಧವಾರ ಸುದ್ದಿಯಾಗಿದ್ದರು.

ಫ್ರೆಂಚ್ ಅಧಿಕಾರಿಗಳು ಈ ಘಟನೆಯನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ(ಐಒಎ)ಗಮನಕ್ಕೆ ತಂದಿದ್ದು ತಕ್ಷಣವೇ ಪಾಂಘಾಲ್ ಹಾಗೂ ಅವರ ಸಹಾಯಕ ಸಿಬ್ಬಂದಿಯನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ಮುಂದಾಗಿತ್ತು.

ನಾನು ಉದ್ದೇಶಪೂರ್ವಕವಾಗಿ ಯಾವುದೇ ತಪ್ಪನ್ನು ಮಾಡಿಲ್ಲ ಎಂದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಅಂತಿಮ್ ಪಾಂಘಾಲ್ ವಾದಿಸಿದರೂ, ಕ್ರೀಡಾಗ್ರಾಮದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ಟೀಮ್ ಇಂಡಿಯಾದ ಶರ್ಟ್ ಧರಿಸಿದ್ದ ಅಂತಿಮ್ ಪಾಂಘಾಲ್ ಶುಕ್ರವಾರ ಘಟನೆಯ ಕುರಿತು ವರದಿಗಾರರೊಂದಿಗೆ ಮಾತನಾಡದೆ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇಗನೆ ನಿರ್ಗಮಿಸಿದರು.

ಅಂತಿಮ್ ಪಾಂಘಾಲ್ ಬುಧವಾರ ಬೆಳಗ್ಗೆ ಮಹಿಳೆಯರ 53 ಕೆಜಿ ಫ್ರಿಸ್ಟೈಲ್ ಕುಸ್ತಿ ಸ್ಪರ್ಧೆಯ ಮೊದಲ ಸುತ್ತಿನಲ್ಲೇ ಟರ್ಕಿಯ ಎದುರಾಳಿ ಯೆಟ್ಗಿಲ್ ಝೆನೆಪ್ ಎದುರು 0-10 ಅಂತರದಿಂದ ಸೋಲನುಭವಿಸಿ ಸ್ಪರ್ಧಾವಳಿಯಿಂದ ಬೇಗನೆ ನಿರ್ಗಮಿಸಿದ್ದರು.

ಸ್ಪರ್ಧೆಯ ನಂತರ ಅಂತಿಮ್ ತನ್ನ ತಂಗಿ ನಿಶಾಗೆ ತನ್ನ ಮಾನ್ಯತಾ ಪತ್ರವನ್ನು ನೀಡಿ, ಕ್ರೀಡಾಗ್ರಾಮದಲ್ಲಿರುವ ತನ್ನ ವಸ್ತುಗಳನ್ನು ತರುವಂತೆ ಹೇಳಿದ್ದರು. ನಿಶಾರನ್ನು ಕ್ರೀಡಾಗ್ರಾಮದ ಭದ್ರತಾ ಸಿಬ್ಬಂದಿ ತಡೆದಿದ್ದರು. ಬುಧವಾರ ರಾತ್ರಿ ಅಂತಿಮ್ ಹಾಗೂ ಆಕೆಯ ಸಹೋದರಿಯನ್ನು ಕ್ರೀಡಾಗ್ರಾಮದ ಪೊಲೀಸ್ ಠಾಣೆಗೆ ಕರೆದೊಯ್ದು ಹೇಳಿಕೆ ಪಡೆಯಲಾಗಿತ್ತು.

ಅಂತಿಮ್ ಪಾಂಘಾಲ್‌ರ ಸಲಹೆಗಾರರಾದ ಭಗತ್ ಸಿಂಗ್ ಹಾಗೂ ವಿಕಾಸ್ ಅವರು ಮತ್ತೊಂದು ಘಟನೆಯಲ್ಲಿ ಪ್ಯಾರಿಸ್‌ನ ಪೊಲೀಸರು ಹಾಗೂ ಟ್ಯಾಕ್ಸಿ ಚಾಲಕರೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಟ್ಯಾಕ್ಸಿ ಚಾಲಕನು ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದನು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News